ಯಳಂದೂರು ತಾಲೂಕಿನ ಎಳೆಪಿಳ್ಳಾರಿ-ಮಲ್ಲಿಗೆಹಳ್ಳಿ ರಸ್ತೆ ಬಳಿ ಗುರುವಾರ ಮೃತಪಟ್ಟ ಚಿರತೆಯ ಕಳೇಬರವನ್ನು ಅರಣ್ಯ ಇಲಾಖೆಯ ಸಿಬ್ಬಂಧಿ ಮರಣೋತ್ತರ ಪರೀಕ್ಷೆ ನಡೆಸಿರುವುದು. 
ಜಿಲ್ಲೆ

ಸ್ವಾಭಾವಿಕವಾಗಿ ಚಿರತೆ ಸಾವು

ಎಂ.ರವಿ

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇವಸ್ಥಾನದಿಂದ ಮಲ್ಲಿಗೆಹಳ್ಳಿ ಹೋಗುವ ಕಾಲುವೆ ಪೊದೆಯಲ್ಲಿ ಮೃತಪಟ್ಟ ಚಿರತೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಶುಕ್ರವಾರ ದೃಢಪಡಿಸಿದೆ.

ಇಲ್ಲಿನ ಪೊದೆಯಲ್ಲಿ ಗುರುವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿತ್ತು. ಈ ವೇಳೆ ಅರಣ್ಯ ಇಲಾಖೆಗೆ ಇಲ್ಲಿನ ರೈತರು ಮಾಹಿತಿ ನೀಡಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿ ಇಲ್ಲಿಗೆ ಬಂದ ವೇಲೆ ಬಿಆರ್‌ಟಿ ನಿರ್ದೇಶಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ಪೊದೆಯಲ್ಲಿ ಅಡಗಿದ್ದ ಚಿರತೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಯಿತು. ಆಗ ಸಾರ್ವಜನಿಕರ ಹಿತದೃಷ್ಟಿ ಹಾಗೂ ಆತ್ಮರಕ್ಷಣೆಗೆ ಗನ್‌ನಿಂದ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಕಾಡತೂಸು ಹಾರಿಸಲಾಯಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಎಸ್.ರವಿ, ರಂಗಸ್ವಾಮಿ ಗ್ರಾಮಸ್ಥರಾದ ಶಿವಮೂರ್ತಿ, ರಂಗಸ್ವಾಮಿ, ಜಿ.ಮೂರ್ತಿ ಅವರ ಮೇಲೆ ಕಾಡತೂಸಿನಿಂದ ಬಂದ ಪಿಲ್ಲೆಟ್ಸ್‌ಗಳು ತಗುಲಿ ಗಾಯಗಳಾಗಿವೆ. ಅಲ್ಲೇ ಇದ್ದ ಬೈಕ್‌ನ ಬಳಿ ಚಿರತೆಯೂ ಬಂದು ಮೃತಪಟ್ಟಿದೆ.

ಗಾಯಗೊಂಡವರನ್ನು ಯಳಂದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯನ್ನು ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಲಾಗಿದೆ. ವೈದ್ಯರು ಸಣ್ಣಪುಟ್ಟ ಗಾಯವಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್ಕರ್ ಅಕ್ಷಯ್ ಅಶೋಕ್, ಆರ್‌ಎಫ್‌ಒ ನಾಗೇಂದ್ರನಾಯಕ್ ನೇತೃತ್ವದಲ್ಲಿ ಪಶುವೈದ್ಯಾಧಿಕಾರಿ ಡಾ. ಆದರ್ಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತಪಟ್ಟ ಚಿರತೆ ಗಂಡಾಗಿದ್ದು, 2 ರಿಂದ 3 ವರ್ಷ ಪ್ರಾಯದ್ದಾಗಿದೆ. ಅದು ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ದೃಢೀಕರಿಸಲಾಗಿದ್ದು, ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.