ಜಿಲ್ಲೆ

ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡಲಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಸುಸ್ಥಿರ ಕೃಷಿ ಪದ್ಧತಿ, ಭೂಮಿ ಫಲವತತ್ತೆ ಹೆಚ್ಚಿಸುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸದೆ ನೈಸರ್ಗಿಕ ಆಧಾರಿತ ಬೆಳೆ ಬೆಳೆಯುವ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನ್ಯಾನೋ ಯೂರಿಯಾ, ಕೃಷಿ ಹೊಂಡಗಳಿಗೆ ತಂತಿ ಬೇಲಿಗಳ ನಿರ್ಮಾಣ, ಯೂರಿಯಾ ದುಷ್ಪರಿಣಾಮ ಕುರಿತು ಬಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರು ಅಧಿಕ ಇಳುವರಿ, ಬೆಳೆ ಸಂರಕ್ಷಣೆಗಾಗಿ ಅನಿಯಮಿತ ರಸಗೊಬ್ಬರ, ಕೀಟನಾಶಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಭೂಮಿ ಲವತತ್ತೆ ಕಳೆದುಕೊಳ್ಳುತ್ತಿದೆ. ಭವಿಷ್ಯದ ದಿನಗಳಲ್ಲಿ ಕೃಷಿ ಭೂಮಿ ಉಳಿಸಿ ಸಂರಕ್ಷಣೆ ಮಾಡಲು ಈಗಿನಿಂದಲೇ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರು ಮುಂದಾಗಬೇಕು ಎಂದು ಕರೆ ನೀಡಿದರು.

ಅಗತ್ಯಕ್ಕೆ ತಕ್ಕಂತೆ ಗೊಬ್ಬರ ವಿತರಿಸಿ: ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳ ಶಿಫಾರಸ್ಸಿನಂತೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು. ಅಧಿಕ ಪ್ರಮಾಣದ ಯೂರಿಯಾ ಗೊಬ್ಬರ ಬಳಕೆಯಿಂದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಸಾವಯವ ಮಾದರಿಯಲ್ಲಿ ಬೆಳೆ ಬೆಳೆಯಲು ರೈತರು ಪ್ರಯತ್ನಿಸಬೇಕು. ರೈತರಿಗೆ ಅವಶ್ಯಕತೆಗೆ ಅನುಗುಣ ಗೊಬ್ಬರ ವಿತರಣೆ ಮಾಡಬೇಕು ಎಂದು ಸೂಚಿಸಿದರು.

ನಿರಂತರ ಜಾಗೃತಿ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್​.ಡಿ. ಕೋಳೇಕರ ಮಾತನಾಡಿ, ಜಿಲ್ಲಾದ್ಯಂತ ನೈಸರ್ಗಿಕ ಕೃಷಿ ಉತ್ತೇಜಿಸಲು ರೈತರಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಎಲ್ಲ ಬೆಳೆಗಳಿಗೆ ಅತಿಯಾಗಿ ಯೂರಿಯಾ ಬಳಕೆ ಮಾಡದಂತೆ, ಕೃಷಿ ಹೊಂಡಗಳಲ್ಲಿ ಯಾವುದೇ ರೀತಿಯ ಅವಡ ಸಂಭವಿಸದಂತೆ ಸುತ್ತಲು ಬೇಲಿ ಹಾಕುವಂತೆ ಮನೆ ಮನೆಗೆ ತೆರಳಿ ತಿಳಿವಳಿಕೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಯೂರಿಯಾ ರಸಗೊಬ್ಬರಗಳ ದುಷ್ಪರಿಣಾಮದ ಕುರಿತು ಹಾಗೂ ಯೂರಿಯಾ ರಸಗೊಬ್ಬರದ ದಾಸ್ತಾನಿನ ಕುರಿತು ಮತ್ತು ನಾನೋ ಯೂರಿಯಾದ ಬಳಕೆ ಕುರಿತು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್​, ವಿನಾಯಕ ತುರಾಯಿದಾರ, ಪ್ರಕಾಶ ಪಾಟೀಲ ಇತರರಿದ್ದರು.