ವಿಜಯವಾಣಿ ಸುದ್ದಿಜಾಲ ಸುಳ್ಯ
ಮಳೆ ಆರಂಭವಾದ ಬಳಿಕ ಸುಳ್ಯ ತಾಲೂಕಿನ ಗ್ರಾಮಗಳು ಕತ್ತಲಲ್ಲಿದೆ. ತನ್ನ ಗ್ರಾಮದಲ್ಲಿ, ನಮ್ಮ ಮನೆಯಲ್ಲಿ 4 ದಿನಗಳಿಂದ ವಿದ್ಯುತ್ ಇಲ್ಲ. ಮಳೆಗಾಲಕ್ಕೆ ಮುನ್ನ ವಿದ್ಯುತ್ ಲೈನ್‌ಗಳನ್ನು ಸುಸ್ಥಿತಿಯಲ್ಲಿಡಲು ಯಾಕೆ ಕ್ರಮ ಕೈಗೊಂಡಿಲ್ಲ, ಮಳೆಗಾಲಕ್ಕೆ ಮುನ್ನ ಏನು ಮಾಡ್ತಾ ಇದ್ರಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಮೆಸ್ಕಾಂ ಇಂಜಿನಿಯರ್‌ಗಳನ್ನು ಪ್ರಶ್ನಿಸಿದ್ದಾರೆ.
ಸುಳ್ಯ ತಾಪಂ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಶಾಸಕರು ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕರೆಂಟ್ ಇಲ್ಲದೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬರುತಿವೆ. ನಮ್ಮ ಗ್ರಾಮದಲ್ಲಿ 4 ದಿನಗಳಿಂದ ಕರೆಂಟ್ ಇಲ್ಲ, ಮೊಬೈಲ್ ಚಾರ್ಜ್ ಮಾಡಲು ಕೂಡ ಸಾಧ್ಯವಾಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಮಳೆಗಾಲಕ್ಕೆ ಮುನ್ನ ಎಲ್ಲ ಸಿದ್ಧತೆಗಳನ್ನು ಮಾಡಿ ಕೊಳ್ಳಲು ಮೊದಲೇ ಸೂಚನೆ ನೀಡಿದ್ದೆ. ಮಳೆಗಾಲ ಪೂರ್ವ ಸಿದ್ಧತೆಗಳು ಮಾಡದ ಕಾರಣ ಈ ರೀತಿ ಸಮಸ್ಯೆ ಆಗಿದೆ ಎಂದು ಶಾಸಕರು ಹೇಳಿದರು.
ಕೇವಲ 10 ಗ್ಯಾಂಗ್‌ಮನ್‌ಗಳಿಂದ ಇಲ್ಲಿನ ಕೆಲಸ ಮಾಡಲು ಸಾಧ್ಯವಿಲ್ಲ, ಆದುದರಿಂದ ಮಳೆಗಾಲಕ್ಕೆ ಹೆಚ್ಚುವರಿ ಗ್ಯಾಂಗ್‌ಮನ್‌ಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ಮಂಜುನಾಥ್, ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕೇಂದ್ರ ಸ್ಥಾನದಲ್ಲೇ ಇದ್ದು ಸ್ಪಂದಿಸಿ
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಉಂಟಾದರೆ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೊರಗೆ ಹೋಗುವಂತಿಲ್ಲ. ಕೇಂದ್ರ ಸ್ಥಾನದಲ್ಲೇ ಇದ್ದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು. ಮರ ಬೀಳುವುದು, ಗುಡ್ಡ ಜರಿತ, ನದಿ ತುಂಬಿ ಹರಿಯುವುದು ಇತ್ಯಾದಿ ವಿಕೋಪಗಳು ನಡೆಯುತ್ತಿರುತ್ತದೆ. ಜನರು ಸಮಸ್ಯೆ ಹೇಳಿಕೊಂಡು ಅಧಿಕಾರಿಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ಎಂಬ ದೂರುಗಳು ಬರಬಾರದು. ಕರೆ ಸ್ವೀಕರಿಸಿ ಸ್ಪಂದನೆ ನೀಡಬೇಕು ಮತ್ತು ತಕ್ಷಣ ಸ್ಥಳ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.
ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ
ಗ್ರಾಮಗಳಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್ ಅಳವಡಿಕೆ, ಕೇಬಲ್ ಅಳವಡಿಕೆಯಿಂದ ರಸ್ತೆ ಬದಿ ಅಗೆದು ಹಾಕಿ ವಿವಿಧ ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಆಗಿದೆ. ಮಳೆಗಾಲ ಮುಗಿಯುವ ತನಕ ಕಾಮಗಾರಿ ಸ್ಥಗಿತ ಮಾಡಿ ಅಥವಾ ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸುವಂತೆ ಶಾಸಕರು ಸೂಚಿಸಿದರು. ಸುಳ್ಯ ನಗರದಲ್ಲಿ ರಸ್ತೆ ಬದಿ ಅಮೃತ್ ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡಿ ಸರಿಯಾಗಿ ಹೊಂಡ ಮುಚ್ಚದೆ ಸಮಸ್ಯೆ ಸೃಷ್ಟಿಯಾಗಿರುವ ಬಗ್ಗೆ ಗರಂ ಆದ ಶಾಸಕರು ಕಾಮಗಾರಿ ನಡೆಸುವ ಒಳಚರಂಡಿ ಮಂಡಳಿ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಿ ಸಭೆಗೆ ಹಾಜರಾಗುವಂತೆ ಸೂಚಿಸಲು ನಪಂ ಮುಖ್ಯಾಧಿಕಾರಿಗೆ ಶಾಸಕರು ತಿಳಿಸಿದರು.