ಜಿಲ್ಲೆ

ನೈಸರ್ಗಿಕ ಪ್ರಸವ, ಜಲ ಪ್ರಸವ ಕೇಂದ್ರ ಆರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಸಂತಾನಹೀನತೆ ಚಿಕಿತ್ಸಾ ಕೇಂದ್ರದಲ್ಲಿ ನೈಸರ್ಗಿಕ ಪ್ರಸವ ಹಾಗೂ ಜಲ ಪ್ರಸವ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರದ ಸಂಸ್ಥಾಪಕಿ ಡಾ. ಗೀತಾ ಭರತ (ಉತ್ತೂರ) ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ದಾಯಿ (ಮಿಡ್​ವೈಫರಿ) ದಿನದಂದು ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 2ನೇ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರಥಮ ಕೇಂದ್ರಗಳಾಗಿವೆ ಎಂದರು.

ಸವೋರ್ದಯ ನೈಸರ್ಗಿಕ ಪ್ರಸವ ಕೇಂದ್ರವು ಸಾಮಾನ್ಯ ಹೆರಿಗೆ ಆಸ್ಪತ್ರೆಗಿಂತ ವಿಭಿನ್ನವಾಗಿದೆ. ಇಲ್ಲಿನ ವೈದ್ಯಕಿಯ ಚಿಕಿತ್ಸೆ ಜತೆಗೆ ಗರ್ಭಿಣಿ ಮತ್ತು ಆಕೆಯ ಶಾರೀರಿಕ, ಮಾನಸಿಕ ಮತ್ತು ಕೌಟುಂಬಿಕ, ಆಧ್ಯಾತ್ಮಿಕ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಗರ್ಭಿಣಿ ಮತ್ತು ಆಕೆಯ ಕುಟುಂಬದ ಕೇಂದ್ರದ ಆರೈಕೆ ಚಿಕಿತ್ಸೆಯ ಪ್ರತಿ ಹಂತವನ್ನು ಆಕೆಯ ಆಯ್ಕೆಗೆ ನೀಡಲಾಗುತ್ತದೆ. ಈ ಕೇಂದ್ರದಲ್ಲಿ ನುರಿತ, ಅಮೆರಿಕದ ಮಿಡ್​ವೈಫರಿ ಬ್ರಿಯಾನಾ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ನರ್ಸ್​ಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದರು.

ಜಲ ಪ್ರಸವ ವಿಧಾನದಲ್ಲಿ ಶಿಶು ಜನನವು ಹಿತವಾದ ಬಿಸಿ ನೀರಿನ ಕೊಳದಲ್ಲಿ ಸಂಭವಿಸುತ್ತದೆ. ಇದರಿಂದ ತಾಯಿ ಹಾಗೂ ಮಗುವಿಗೆ ಸಾಕಷ್ಟು ಲಾಭಗಳಿವೆ. ಬಿಸಿಯಾದ ನೀರು ನೋವು ನಿವಾರಕ ಹಾಗೂ ಹಿತಕಾರಿ. ಹೀಗಾಗಿ ಬಿಸಿ ನೀರಿನಲ್ಲಿ ಪ್ರಸವ ಮಾಡಲಾಗುತ್ತದೆ. ಇದರಿಂದ ಹೆರಿಗೆ ಸಮಯವು ಕಡಿತವಾಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಿಜೇರಿಯನ್​ ಹೆರಿಗೆಗಳ ಪ್ರಮಾಣ (ಶೇ. 50-60) ಹೆಚ್ಚಿದೆ. ಇದೇ ಕಾರಣಕ್ಕೆ ಮಿಡ್​ವೈಫರಿ ಆರಂಭಿಸಲಾಗಿದೆ. ಸರ್ವೋದಯ ನೈಸರ್ಗಿಕ ಪ್ರಸವ ಉಪಕ್ರಮದ ಅಡಿ ಸ್ಥಾನಿಕ ಶುಶ್ರೂಷಕಿಯರಿಗೆ ತರಬೇತಿ ನೀಡಲು ಕೇಂದ್ರ ಆರಂಭಿಸಲಾಗುವುದು ಎಂದರು.

ಬ್ರಿಯಾನಾ, ಡಾ. ರಶ್ಮಿ ಲಾಂಡೆ, ಡಾ. ವಿದ್ಯಾ ಕುಲಕರ್ಣಿ, ಇತರರು ಇದ್ದರು.