ಮಾನ್ವಿ: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಜು. 9 ರಂದು ದೇಶಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ ಹೇಳಿದರು.
ಇದನ್ನೂ ಓದಿ:ವಿರಾಜಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮಂಗಳವಾರ ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದರು. ಕೇಂದ್ರ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿದು ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗುವ ರೀತಿಯಲ್ಲಿ ನೀತಿಗಳನ್ನು ರೂಪಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು ಕೆಲಸದ ಪರಿಸ್ಥಿತಿ, ಕಾರ್ಮಿಕರ ದುಡಿಯುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಹೋರಾಟದ ಹಕ್ಕು ಸೇರಿದಂತೆ ಕಾರ್ಮಿಕರ ಮೂಲಭೂತ ಹಕ್ಕುಗಳಿಗೆ ಮಾರಕವಾಗಿದ್ದು, ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ತಾಲೂಕು ಅಧ್ಯಕ್ಷ ಚನ್ನಬಸವ ಜಾನೇಕಲ್, ಅಂಗನವಾಡಿ ನೌಕರರ ಫೆಡರೇಷನ್ ತಾಲೂಕು ಗೌರವಾಧ್ಯಕ್ಷ ಎಂ.ಬಿ.ಸಿದ್ದರಾಮಯ್ಯಸ್ವಾಮಿ, ವಸತಿ ನಿಲಯ ಕಾರ್ಮಿಕರ ತಾಲೂಕು ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಸಿದ್ದಲಿಂಗಯ್ಯ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರುದ್ರಪ್ಪ ನಾಯಕ್, ರಾಮಣ್ಣ ಮಾಡಬಾಯಿ, ರಾಮಣ್ಣ, ಹನುಮಂತು, ಅಮರೇಶ, ಮಹಾಂತೇಶ, ಸಂಗೀತಾ, ಮುಸ್ತಾನ್ ಇತರರಿದ್ದರು.