ಮೈಸೂರು: ಯೋಗದ ಮಹತ್ವ ಸಾರುವ ಸಲುವಾಗಿ ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು ಉದ್ಬೂರು ಗ್ರಾಮದ ಯೋಗ ಶಿಕ್ಷಕ ಕೃಷ್ಣ ನಾಯಕ ಹೇಳಿದರು.
ಪಾದಯಾತ್ರೆಯನ್ನು ಅ.16 ರಂದು ಬೆಳಗ್ಗೆ 10ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಪ್ರಾರಂಭಿಸಲಾ ಗುವುದು. ಒಟ್ಟು 15,000 ಕಿ.ಮೀ. ಪಾದಯಾತ್ರೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಪ್ರತಿನಿತ್ಯ 30 ರಿಂದ 40 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಾಗುವುದು. ಪಾದಯಾತ್ರೆ ಕೈಗೊಳ್ಳುವ ಮಾರ್ಗದಲ್ಲಿ ಸಸಿಗಳು ಹಾಗೂ ಬೀಜಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗುವುದು. ಅಲ್ಲದೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಯೋಗದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನಿಂದ ಪ್ರಾರಂಭಗೊಳ್ಳುವ ಪಾದಯಾತ್ರೆಯು ಹುಣಸೂರು, ಕುಶಾಲನಗರ, ಮಡಿಕೇರಿ, ಸುಳ್ಯ, ಕಾಸರಗೋಡು, ತ್ರಿಶೂರು, ತಲಚೇರಿ, ಕೋಜಿಕೋಡ್, ತಿರುವನಂತಪುರಂ, ಕನ್ಯಾಕುಮಾರಿ, ಮಧುರೈ, ತಂಜಾವೂರು, ಪುದುಚೇರಿ, ಚೆನೈ, ಹೈದರಬಾದ್, ವಿಶಾಖಪಟ್ನ, ಭುವನೇಶ್ವರ್, ಕೋಲ್ಕತ್ತಾ, ತ್ರಿಪುರ, ಅಗರ್ತಲ, ಕೋಹಿಮಾ, ಇಟಾನಗರ, ಗುವಾಹಟಿ, ಗಯಾ, ವಾರಣಾಸಿ, ಪ್ರಯಾಗ್ರಾಜ್, ಲಕ್ನೊ, ಆಗ್ರಾ, ನವದೆಹಲಿ, ಹರಿದ್ವಾರ, ಶಿಮ್ಲಾ, ಜಮ್ಮು ಕಾಶ್ಮೀರ, ಅಮೃತಸರ, ಚಂಡೀಗಡ, ಜೈಪುರ, ಭೂಪಾಲ್, ಇಂದೋರ್, ಗಾಂಧಿನಗರ, ಮುಂಬೈ, ಹೊಸಕೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಮಂಡ್ಯ ಮೂಲಕ ಸಾಗಿ ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ. ಒಟ್ಟು 15,000 ಕಿ.ಮೀ. ಪಾದಯಾತ್ರೆ ಕೈಗೊಳ್ಳಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉದ್ಬೂರು ಗ್ರಾಮಸ್ಥರಾದ ಕೃಷ್ಣ, ದಯಾಕರ್, ಪ್ರಶಾಂತ್, ರಂಗಸ್ವಾಮಿ ಇದ್ದರು.