ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಂದರು ಯೋಜನೆಗಳನ್ನು ಕೈಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದ್ದು, ಅವರು ಸಂಬಂಧಪಟ್ಟವರ ಜತೆ ಚರ್ಚಿಸಿ, ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ನ್ಯಾಷನಲ್ ಫಿಶ್ ವರ್ಕರ್ಸ್ ಫೋರಂನ ಅಧ್ಯಕ್ಷ ರಾಮಕೃಷ್ಣ ತಾಂಡೇಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದರು ಯೋಜನೆಗಳಿಂದ ಮೀನುಗಾರಿಕೆ ನಡೆಸುವ ಪ್ರದೇಶಗಳು ಸ್ವಾಧೀನವಾಗುತ್ತವೆ. ಪರಿಣಾಮ ಮೀನುಗಾರಿಕೆ ಹಾಗೂ ನಂತರ ಮೀನುಗಾರರು ನಾಶವಾಗುವ ಪರಿಸ್ಥಿತಿ ಬರುತ್ತದೆ. ಕೇರಳ, ಮಹಾರಾಷ್ಟ್ರದಲ್ಲೂ ಬೃಹತ್ ಬಂದರುಗಳ ನಿರ್ಮಾಣದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನಾವರ ಕಾಸರಕೋಡು ಹಾಗೂ ಅಂಕೋಲಾ ಕೇಣಿ ಬಂದರು ವಿರೋಧಿಸಿ ಹೋರಾಟ ನಡೆಸಿದ ಮೀನುಗಾರರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಅವರ ಮೇಲೆ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ನಾವು ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿ, ಘಟನೆಯನ್ನು ಖಂಡಿಸಿದ್ದೆವು.
ಕೇರಳ ಎಂಪಿ ಅವರ ಸೂಚನೆಯಂತೆ ನಾವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಅವರ ನಮ್ಮ ಬೇಡಿಕೆಗಳಿಗೆ 15 ದಿನಗಳಲ್ಲಿ ಸ್ಪಂದಿಸದೇ ಹೋದರೆ ನಾವು ಮುಂದೆ ಮಳೆಗಾಲದ ಅಧಿವೇಶದನದ ವೇಳೆ ದೆಹಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಫೋರಂನ ಪ್ರಧಾನ ಕಾರ್ಯದರ್ಶಿ ಗೋವಾದ ಒಲ್ಲೇಂಶೋ ಸಿಮೋಸ್ ಮಾತನಾಡಿ, ಮರ್ಮಗೋವಾ ಪೋರ್ಟ್ ಅಥಾರಿಟಿ ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಪೂರ್ಣ ಕರಾವಳಿಯನ್ನು ಅಥಾರಿಟಿಗೆ ಸೇರಿದ್ದು ಎಂದು ಪ್ರತಿಪಾದಿಸಲಾಗುತ್ತಿದೆ. ಬಂದರುಗಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮೀನುಗಾರಿಕೆಯನ್ನೂ ಅಕ್ರಮ ಎಂದು ಹೇಳಲಾಗುತ್ತಿದೆ. ಮೀನುಗಾರಿಕೆ ನಡೆಸಲು ಲೀಸ್ ಪಡೆಯಬೇಕು ಎಂದು ಹೇಳಲಾಗುತ್ತಿದೆ. ಬಂದರು ನಿರ್ಮಾಣವಾದರೆ ಅದಕ್ಕೆ ಸಂಪರ್ಕ ಕಲ್ಪಿಸಲು ಚತುಷ್ಪಥ, ರೈಲ್ವೆ ಲೈನ್‌ಗೆ ಜಾಗಬೇಕು. ಕಲ್ಲಿದ್ದಲು ಮುಂತಾದ ಸರಕು ಬಂದರೆ ಮಾಲಿನ್ಯ ಉಂಟಾಗುತ್ತದೆ. ಒಟ್ಟಾರೆ ಮೀನುಗಾರಿಕೆಗೆ ಬಳಕೆಯಾಗುವ ಸಂಪೂರ್ಣ ಪ್ರದೇಶ ನಾಶವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ದೇಶದಲ್ಲಿ ಅದಾನಿ ಒಂದೇ ಕಂಪನಿಗೆ ಸಾಕಷ್ಟು ಬಂದರುಗಳನ್ನು ನೀಡಲಾಗುತ್ತಿದೆ. ಇದು ಅಪಾಯದ ಮುನ್ಸೂಚನೆ ಎಂದರು. ಅರಣ್ಯ ಅತಿಕ್ರಮಣದಾರರ ರಕ್ಷಣೆಗೆ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದAತೆ ಕರಾವಳಿ ಮೀನುಗಾರರ ಹಕ್ಕು ರಕ್ಷಣೆಗೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಫೋರಂ ಸದಸ್ಯ ವಿಕಾಸ ತಾಂಡೇಲ ಮಾತನಾಡಿ, ನಾವು ಬಂದರುಗಳೇ ಬೇಡ ಎನ್ನುತ್ತಿಲ್ಲ. ಆದರೆ, ಮೀನುಗಾರರ ಹಕ್ಕು ಕಸಿದುಕೊಂಡು ಬಂದರು ಮಾಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಉತ್ತರ ಕನ್ನಡ ಕರಾವಳಿ ಸೂಕ್ಷ÷್ಮ ಪ್ರದೇಶ. ಇಲ್ಲಿ ಇನ್ನಷ್ಟು ಯೋಜನೆಗಳ ಭಾರ ಬೇಡ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ಹೇಳಿದೆ. ಬಂದರಿನAತೆ ಕೆಂಪು ಪಟ್ಟಿಯಲ್ಲಿರುವ ಕೈಗಾರಿಕೆಗಳನ್ನು ಜಿಲ್ಲೆಗೆ ತರಬಾರದು ಎಂಬುದು ನಮ್ಮ ಒತ್ತಾಯವಾಗಿದೆ. ಮಾತ್ರವಲ್ಲ ಕದಂಬ ನೌಕಾ ನೆಲೆಯ ಪಕ್ಕವೇ ಖಾಸಗಿ ಬಂದರು ನಿರ್ಮಾಣ ಭದ್ರತೆಯ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬುದನ್ನೂ ಯೋಚಿಸಬೇಕಿದೆ ಎಂದರು. ಫೋರಂನ ಜಂಟಿ ಕಾರ್ಯದರ್ಶಿ ಕೆ.ಲಕ್ಷ್ಮೀಪ್ರಿಯಾ ವೆಂಕಟೇಶ, ಸದಸ್ಯರಾದ ಉಜ್ವಲಾ ಪಾಟೀಲ್, ಸ್ಥಳೀಯ ಪ್ರಮುಖರಾದ ಸಂಜೀವ ಬಲೆಗಾರ್,ಜ್ಞಾನೇಶ್ವರ ಹರಿಕಂತ್ರ, ನೀಲೇಶ ಹರಿಕಂತ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.