ಜಿಲ್ಲೆ

ಅ.9ರಿಂದ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಷಿಪ್

ಮೈಸೂರು: ವಿವಿಧ ಯೋಗ ಸಂಘಟನೆಗಳಿಂದ ನಗರದಲ್ಲಿ ಪ್ರಥಮ ಬಾರಿಗೆ ಅ.9ರಿಂದ 12ರವರೆಗೆ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಷಿಪ್ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಘದ ಅಧ್ಯಕ್ಷ ಪಿ.ಎನ್.ಗಣೇಶ್‌ಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಘ, ಗ್ಲೋಬಲ್ ಯೋಗ ಫೋರಂ, ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ಜಿಲ್ಲಾ ಯೋಗ ಕ್ರೀಡಾ ಫೌಂಡೇಷನ್, ಜಿಎಸ್‌ಎಸ್ ಯೋಗ ಮತ್ತು ಗ್ಲೋಬಲ್ ವೆಲ್‌ನೆಸ್ ಯೋಗ ಸೆಂಟರ್‌ಗಳ ಸಹಯೋಗ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂಜನಗೂಡು ರಸ್ತೆಯಲ್ಲಿರುವ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಯೋಗ ಫೆಡರೇಷನ್ ಆಫ್ ಇಂಡಿಯಾದಡಿ 50ನೇ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಷಿಪ್ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದರು.

ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ನಡೆಯಲಿರುವ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಷಿಪ್‌ನಲ್ಲಿ ದೇಶದ 34 ರಾಜ್ಯಗಳಿಂದ ಒಂದು ಸಾವಿವರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸುಮಾರು 200 ರಾಷ್ಟ್ರೀಯ ತೀರ್ಪುಗಾರರು ನಿರ್ವಹಿಸಲಿದ್ದಾರೆ. ಈಗಾಗಲೇ ಎಲ್ಲ ಸ್ಪರ್ಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುವರ್ಣ ಮಹೋತ್ಸವಕ್ಕೆ ಏಷ್ಯನ್‌ಯೋಗ ಫೆಡರೇಷನ್ ಅಧ್ಯಕ್ಷ ಅಗರ್ವಾಲ್, ಸಿಇಒ ಇಂದು ಅಗರ್ವಾಲ್, ಯೋಗ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಅನಿರುದ್ಧ್ ಗುಪ್ತ, ಕಾರ್ಯದರ್ಶಿ ಡಾ.ಅಭಿನವ್ ಜೋಶಿ, ಪದಾಧಿಕಾರಿಗಳು ಹಾಗೂ 34 ರಾಜ್ಯಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಜತೆಗೆ ದೇಶದ ಗಣ್ಯರು, ಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.

ನಾದಮಂಟಪದ ವೇದಿಕೆಯಲ್ಲಿ ಏಕ ಕಾಲಕ್ಕೆ ವಯೋಮಿತಿಗೆ ಅನುಗುಣವಾಗಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರನ್ನು ಅಂದೇ ಘೋಷಿಸಲಾಗುತ್ತದೆ. ಅ.12ರಂದು ಆಯೋಜಿಸಿರುವ ಸಮಾರೋಪದಲ್ಲಿ ಬಹುಮಾನ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಷಿಪ್‌ನಲ್ಲಿ ವಿಜೇತರಾದವರಿಗೆ ಮುಂಬರುವ ಏಷ್ಯನ್ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಭಾರತದಲ್ಲಿ ಪ್ರತಿನಿಧಿಸುವ ಅವಕಾಶ ನೀಡಲಾಗುತ್ತದೆ ಎಂದರು.

ಜಿ.ಎನ್.ಕೃಷ್ಣಮೂರ್ತಿ, ಗಂಗಾಧರಪ್ಪ, ಎ.ನಟರಾಜ, ಉಮೇಶ್ ಗಣಪತಿ ಶೇಟ್, ಮಂಜುಳಾ, ಶ್ರೀಧರ್, ಎಚ್.ಕೆ.ಗೀತಾಕುಮಾರ್ ಇದ್ದರು.