ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಭಾಷೆ ನಮ್ಮ ಬಲ, ಮಾತು ನಮ್ಮ ಆಯುಧ. ಬರವಣಿಗೆ ಮತ್ತು ಗ್ರಹಿಕೆಯ ಸೂಕ್ಷ್ಮತೆ ಅರಿಯದವರು ಮಾಧ್ಯಮ ಕ್ಷೇತ್ರದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಭಾಷೆ ಮತ್ತು ಬರವಣಿಗೆಯೇ ಮಾಧ್ಯಮ ಉದ್ಯೋಗಾಕಾಂಕ್ಷಿಗಳ ಅಸ್ತ್ರ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆ(ಪಿ.ಎಂ.ಉಷಾ) ಪ್ರಾಯೋಜಕತ್ವದಲ್ಲಿ ವಿಶ್ವವಿದ್ಯಾಲಯದ ಡಾ.ಯು.ಆರ್.ರಾವ್ ಸಭಾಂಗಣದಲ್ಲಿ ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು ಎಂಬ ವಿಷಯಾಧಾರಿತವಾಗಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಅವಕಾಶಗಳಿದ್ದು ಅದಕ್ಕೆ ಬೇಕಾದ ಸೂಕ್ಷ್ಮತೆ, ಭಾಷಾ ಬಳಕೆ, ಬರವಣಿಗೆ ಕ್ರಮ ಮತ್ತು ಕಲ್ಲನ್ನೂ ಮಾತಾಡಿಸುವ ಕಲೆ ರೂಢಿಸಿಕೊಂಡು ಮಾಧ್ಯಮಗಳ ಮನೋಧರ್ಮಕ್ಕೆ ತಕ್ಕದಾದ ಕೌಶಲದ ಜತೆ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಸೇರಿಕೊಂಡಾಗ ಗೌರವ ದೊರಕುತ್ತದೆ. ಇಂದು ಮಾಧ್ಯಮ ಶಿಕ್ಷಣ ಪತ್ರಿಕೆ, ರೇಡಿಯೊ, ಟಿವಿಗೆ ಸೀಮಿತವಾಗಿಲ್ಲ. ಈವೆಂಟ್ ಮ್ಯಾನೇಜ್‌ಮೆಂಟ್, ಜಾಹೀರಾತು, ಸಾರ್ವಜನಿಕ ಸಂಪರ್ಕಗಳು ಮೊದಲಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡು, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಸೃಷ್ಟಿಸಿದೆ. ಅಲ್ಲದೆ ದುಡ್ಡು ಬಿತ್ತಿ ಬೆಳೆಯುವ ಕ್ಷೇತ್ರವಾಗಿ ರೂಪುಗೊಂಡಿದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಮತ್ತು ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು.
ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಕಾರ್ಯಾಗಾರ ಸಂಚಾಲಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.