ವಿಜಯವಾಣಿ ಸುದ್ದಿಜಾಲ ಇಂಡಿ
ಪ್ರಾಥಮಿಕ ಹಂತದಲ್ಲಿಯೇ ಮಕ್ಕಳನ್ನು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಅಂದಾಗ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಕಾಯ್ದುಕೊಳ್ಳಲು ಸಾಧ್ಯ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ತುಂಬ ಸಹಕಾರಿ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ ಹೇಳಿದರು.
ಇಲ್ಲಿನ ಆಪಲ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಮೇಜರ್ ಧ್ಯಾನಚಂದ್ ಅವರ ಸವಿನೆನಪಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಕ್ರೀಡಾ ದಿನಾಚರಣೆ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇಜರ್ ಧ್ಯಾನಚಂದ್ ಜಗತ್ತಿನ ಶ್ರೇಷ್ಠ ಹಾಕಿಪಟು. ಹಾಕಿ ಕ್ರೀಡಾಕೂಟದಲ್ಲಿ ಭಾರತದ ಘನತೆಯನ್ನು ವಿಶ್ವಮಟ್ಟಕ್ಕೆ ಏರಿಸಿದ ಖ್ಯಾತಿ ಧ್ಯಾನಚಂದ್ ಅವರದ್ದು. ಸ್ಪಷ್ಟ ಗುರಿ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಧ್ಯಾನಚಂದರ ಕುರಿತು ತಿಳಿದುಕೊಂಡು ಆ ಸಾಧನೆಯ ಸೂತ್ರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಗಡಿಭಾಗದಲ್ಲಿ ಶೈಕ್ಷಣಿಕ ಬರ ಅಳಿಸುವ ನಿಟ್ಟಿನಲ್ಲಿ ಆಪಲ್ ಇಂಟರ್‌ನ್ಯಾಶನಲ್ ಸ್ಕೂಲ್ ಅಪಾರ ಶ್ರಮವಹಿಸುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಸಂಸ್ಥೆಯಿಂದ ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಅದುವೇ ಈ ದೇಶಕ್ಕೆ ನಾವೆಲ್ಲರೂ ನೀಡುವ ಕೊಡುಗೆ ಎಂದರು.
ರಮೇಶ ಬಗಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಸುಕನ್ಯಾ ಯು.ಜವಳಿ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದಗೌಡ ಬಿರಾದಾರ ನಿರ್ವಹಿಸಿದರು. ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.