ಜಿಲ್ಲೆ

ರಾಜ್ಯದಲ್ಲಿ ಎಂಇಎಸ್‌ಗೆ ನಿರ್ಬಂಧ ಹೇರಿ

ವಿಜಯಪುರ: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪದೇ ಪದೆ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ಸಂಘಟನೆ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲು ಆಗ್ರಹಿಸಿ ಕರವೇ ಮತ್ತು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸಂಸ್ಥೆ ಕಾರ್ಯಕರ್ತರು ಶನಿವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, ಛತ್ರಪತಿ ಶಿವಾಜಿ, ಕರುನಾಡಿಗಾಗಿ ತ್ಯಾಗ, ಬಲಿದಾನದ ಮೂಲಕ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇವರಿಬ್ಬರೂ ಮಹಾ ಪುರುಷರು. ಜತೆಗೆ ದೇಶಪ್ರೇಮಿಗಳು ಹೌದು. ಆದರೆ, ಪ್ರಾದೇಶಿಕ ರಾಜ್ಯಗಳ ಅನುಗುಣವಾಗಿ ಸಂಗೊಳ್ಳಿ ರಾಯಣ್ಣ ಅವರ ಜನ್ಮ ಸ್ಥಾನ ಮತ್ತು ಕರ್ಮಸ್ಥಾನ ಬೆಳಗಾವಿ ಜಿಲ್ಲೆ. ಹೀಗಾಗಿ ಅವರ ಪ್ರತಿಮೆ ಅಲ್ಲಿ ಸ್ಥಾಪಿಸಲು ಪ್ರಾಮುಖ್ಯತೆ ಕೊಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಎಂಇಎಸ್ ಕಾರ್ಯಕರ್ತರು ಪದೇ ಪದೆ ಕನ್ನಡಿಗರ ಮೇಲೆ ದಬ್ಬಾಳಿಕೆ ಮೆರೆಯುತ್ತಿದ್ದಾರೆ. ಇವರ ಉಪಟಳ ಹೆಚ್ಚಿದ್ದು, ಅಂಕುಶ ಹಾಕುವ ಅನಿವಾರ್ಯತೆ ಇದೆ. ಇಂಥ ರಾಜ್ಯ ವಿರೋಧಿ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ರಾಜ್ಯ ಕುರುಬರ ಸಂಘದ ಸಹಕಾರ್ಯದರ್ಶಿ ರವಿ ಕಿತ್ತೂರ ಮಾತನಾಡಿ, ಒಂದಿಲ್ಲೊಂದು ರೀತಿಯ ವಿವಾದವನ್ನು ಸೃಷ್ಟಿಸುವುದು, ಕನ್ನಡಿಗರನ್ನು ಕೆರಳಿಸುವುದು, ಬೆಳಗಾವಿ ವಿಷಯವಾಗಿ ತಂಟೆ ತಕರಾರು ಮಾಡುತ್ತ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದರು.
ಅಲ್ಲದೆ, ಕರವೇ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮತ್ತು ಕುರುಬ ಸಮಾಜದ ಮುಖಂಡರಾದ ಗುರನಗೌಡ ಪಾಟೀಲ ಮಾತನಾಡಿದರು.
ಮುಖಂಡರಾದ ಮಹಾದೇವ ರಾವಜಿ, ಸಾಯಿಬಣ್ಣ ಮಡಿವಾಳರ, ಪ್ರಕಾಶ ಕುಂಬಾರ, ದಸ್ತಗೀರ ಸಾಲೋಟಗಿ, ಸೋಮನಾಥ ಕಳ್ಳಿಮನಿ, ಯಾಜ ಕಲಾದಗಿ, ರಜಾಕ ಕಾಖಂಡಕಿ, ಶಾಹಜಾನ ಖಾದ್ರಿ, ದಯಾನಂದ ಸಾವಳಗಿ, ಎ.ಎಚ್. ಡೋಣುರ, ದುಂಡಪ್ಪ ಕುಮಟಗಿ, ಕಾಂತು ಇಂಚಗೇರಿ, ಮೋಹನ ದಳವಾಯಿ, ಮಲ್ಲು ಪರಸನ್ನವರ, ಮನೋಹರ ತಾಜವ, ಅಶೋಕ ಕಾಂಬಳೆ, ಸದಾಶಿವ ಬುಟಾಳೆ, ಸಿದ್ದು ಭಾವಿಕಟ್ಟಿ, ಲಕ್ಷ್ಮಣ ಪಾಟೀಲ, ರಾಜು ಬಾಬಾನಗರ, ಸದಾಶಿವ ಪೂಜಾರಿ, ಬಾಬು ಹಂಚನಾಳ, ರವಿ ಉತ್ನಾಳ, ಮಲ್ಲಿಕಾರ್ಜುನ ಬಿರಾದಾರ ಮತ್ತಿತರರಿದ್ದರು.