ಜಿಲ್ಲೆ

ಆಸ್ಪತ್ರೆಗಳ ಗುಣಮಟ್ಟ ನಿರ್ಲಕ್ಷ್ಯಿಸಿದರೆ ಶಿಸ್ತುಕ್ರಮದ ಎಚ್ಚರಿಕೆ

ಪಂಕಜ ಕೆ.ಎಂ.

ಬೆಂಗಳೂರು: ಆರೋಗ್ಯ ಇಲಾಖೆ ವ್ಯಾಪ್ತಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಗುಣಮಟ್ಟ ಭರವಸೆಯ ಮಾನದಂಡಗಳ (National Quality Assurance Standards) ಅಳವಡಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸದ ಆಸ್ಪತ್ರೆಗಳ ವೈದ್ಯಕೀಯ, ಅರೆ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಇಲಾಖೆ ಸೂಚಿಸಿದೆ.

ಈ ಸಂಬಂಧ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಎಸ್.ಪ್ರದೀಪ್ ಕುಮಾರ್ ಆದೇಶ ಹೊರಡಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ಮಾನದಂಡಗಳನ್ನು ಅಳವಡಿಸಿಕೊಂಡು ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ವಿಫಲವಾಗುವ ತಂಡವನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಅಡಿಯಲ್ಲಿ ನೀಡಲಾಗುತ್ತಿರುವ ಪ್ರೋತ್ಸಾಹಧನದಿಂದ ಅನರ್ಹಗೊಳಿಸುವುದಾಗಿ ತಿಳಿಸಿದ್ದಾರೆ.

ಕನಿಷ್ಠ 6 ತಿಂಗಳ ಒಳಗಾದರೂ ಮಾನದಂಡಗಳ ಗುರಿ ಸಾಧನೆ ಮಾಡಬೇಕು. ಇಲ್ಲವಾದಲ್ಲಿ ಆಸ್ಪತ್ರೆಗಳ ವೈದ್ಯಕೀಯ/ಅರೆವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ಷರಾ ದಾಖಲಿಸಿ, ಅಂತಹವರ ವರ್ಗಾವಣೆಗೆ ಕ್ರಮ ವಹಿಸಲಾಗುವುದು. ಇಲ್ಲವೆ 9 ತಿಂಗಳೊಳಗೆ ಯಾವುದೇ ಸಾಧನೆ ಮಾಡದಿದ್ದರೆ ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮುಖ್ಯ ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ ಹಾಗೂ ಸಿಬ್ಬಂದಿ ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯಲಾಗುವುದು ಎಂದು ಹೇಳಿದ್ದಾರೆ.

ಈ ಎಲ್ಲ ಕ್ರಮಗಳ ಹೊರತಾಗಿಯೂ ಪ್ರಗತಿ ಸಾಧಿಸದ ಆರೋಗ್ಯ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿಯನ್ನು ಕಳಪೆ ಮಟ್ಟದ ಆರೈಕೆ ಹಾಗೂ ಚಿಕಿತ್ಸೆ ಇತ್ಯಾದಿಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದ್ದಾರೆ.

ಗುಣಮಟ್ಟ ಮಾನದಂಡಗಳು: ಅಂತಾರಾಷ್ಟ್ರೀಯ ಮಟ್ಟದಲ್ಲಿ 2021-2030ರ ಅವಧಿಯನ್ನು ಗುಣಮಟ್ಟದ ಸೇವೆಗಳ ದಶಕವೆಂದು ೋಷಿಸಲಾಗಿದೆ. ಆದರೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯ ಗುಣಮಟ್ಟ ಕೊರತೆ ಹಾಗೂ ವಿಳಂಬ ಮತ್ತು ಔಷಧ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇ.50 ಅಧಿಕ ಗುಣಮಟ್ಟ ಕುಸಿದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಗುಣಮಟ್ದ ಭರವಸೆಯ ಮಾನದಂಡಗಳನ್ನು ನಿಗದಿಪಡಿಸಿತು. ಇದರ ಸರಿಯಾದ ಅಳವಡಿಕೆಯಿಂದ ಸಾರ್ವಜನಿಕ ಆರೋಗ್ಯ ರಕ್ಷಣೆಯ ವಿಶ್ವಾಸಾರ್ಹತೆ ಹೆಚ್ಚುವುದರ ಜತೆಗೆ ರೋಗಿಗಳಿಗೆ ಒದಗಿಸುವ ಆರೈಕೆಯ ಗುಣಮಟ್ಟ ಸುಧಾರಣೆ ಆಗಲಿದೆ.