ಜಿಲ್ಲೆ

ತಾಯಿ ಜವಾಬ್ದಾರಿ ಮರೆತರೆ ಮಕ್ಕಳಿಗೆ ತೊಂದರೆ

Davangere - Prakash Arali

ಚನ್ನಗಿರಿ: ಮಕ್ಕಳು ಅಪೌಷ್ಟಿಕತೆಯಿಂದ ಬಳಲಲು ಪಾಲಕರೇ ಕಾರಣ. ತಾಯಿಯಾಗಿ ಅನೇಕ ಜವಾಬ್ದಾರಿಗಳು ಇರುತ್ತವೆ. ನಿರ್ಲಕ್ಷ್ಯ ಮಾಡಿದರೆ ಅಪೌಷ್ಟಿಕತೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಧೀಶ ಸಿದ್ದಲಿಂಗಯ್ಯ ಗಂಗಾಧರಮಠ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬೆಳೆಯುವ ಹಂತದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಾ ಪೋಷಣೆ ಮಾಡಿದಾಗ ಉತ್ತಮ ಆರೋಗ್ಯ ಹೊಂದಬಲ್ಲರು. ಸರ್ಕಾರ ಮಕ್ಕಳ ಆರೋಗ್ಯ ಕಾಪಾಡುವ ಸಲುವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದೆ. ಇದರ ಪ್ರಯೋಜನವನ್ನು ಮಕ್ಕಳು ಪಡೆಯಬೇಕು ಎಂದರು.
ದೇಶದ ಆರ್ಥಿಕ ವ್ಯವಸ್ಥೆ ಪ್ರಜೆಗಳ ಸದೃಢತೆಯ ಮೇಲೆ ನಿಂತಿದೆ. ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತವಾದರೆ ಮತ್ತು ಅನಾರೋಗ್ಯಗಳಿಗೆ ತುತ್ತಾದರೆ ಜೀವನ ಪೂರ್ತಿ ಅಂಗವಿಕಲರಾಗಿ ಒಂದೇ ಕಡೆಯಲ್ಲಿ ಇರಬೇಕಾಗುತ್ತದೆ. ಇದರಿಂದ ಅವರ ಕುಟುಂಬಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಲಿದೆ. ಮನುಷ್ಯ ಕ್ರಿಯಾಶೀಲನಾಗಬೇಕಾದರೆ ಪೌಷ್ಟಿಕತೆ ಅವಶ್ಯವಾಗಿದೆ ಎಂದರು.
ಸಿಡಿಪಿಒ ಎಸ್.ಎಸ್.ಸದಾನಂದ ಮಾತನಾಡಿ, ಹುಟ್ಟಿನಿಂದ ಆರು ವರ್ಷದವರೆಗಿನ ಮಕ್ಕಳಿಗೆ ಇಲಾಖೆಯಿಂದ ಪೂರಕವಾದ ಪೌಷ್ಟಿಕ ಅಹಾರ ವಿತರಿಸಲಾಗುತ್ತದೆ. ಗರ್ಭಿಣಿ, ಬಾಣಂತಿಯರು ನಿರ್ಲಕ್ಷ್ಯ ತೋರದೆ ನಿಮಗೆ ನೀಡಿರುವ ಆಹಾರ ಪಡೆದುಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಬಸವರಾಜಪ್ಪ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಪ್ಪ, ಕೆ.ಮಂಜುನಾಥ್, ತಿಪ್ಪೇಶ್, ಧನಂಜಯ, ಕಚೇರಿಯ ಮೇಲ್ವಿಚಾರಕಿ ಪ್ರೇಮಾ ಇದ್ದರು.