ಜಿಲ್ಲೆ

ರಂಗಾಯಣದಿಂದ ಜ.14ರಿಂದ 19ರವರೆಗೆ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವ

ಮೈಸೂರು: ರಂಗಾಯಣದಿಂದ ಜ.14ರಿಂದ 19ರವರೆಗೆ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಹೇಳಿದರು.

ಬಹುರೂಪಿ ನಾಟಕೋತ್ಸವ-2025ರ ಪೂರ್ವ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಕಲಾಮಂದಿರದಲ್ಲಿ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವ ಹಮ್ಮಿಕೊಂಡಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು, ಸಂಘಸಂಸ್ಥೆಗಳು, ರಂಗ ತಂಡಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಮೈಸೂರಿಗೆ ರಂಗಾಯಣ ಒಂದು ಹೆಮ್ಮೆಯಾಗಿದೆ. ನಾಡಹಬ್ಬ ದಸರಾವನ್ನು ಅಚ್ಚುಕಟ್ಟಾಗಿ ಆಚರಿಸುವುದು ನಮ್ಮ ಜಿಲ್ಲೆಗೆ ಕೀರ್ತಿ. ಬಹುರೂಪಿ ನಾಟಕೋತ್ಸವವನ್ನು ಅದೇ ಮಾದರಿ ಯಶಸ್ವಿಗೊಳಿಸಬೇಕಿದೆ. ನಾಗರಿಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ನಗರಪಾಲಿಕೆಯಿಂದ ಕಲಾಮಂದಿರ ಹಾಗೂ ರಂಗಾಯಣದ ಆವರಣದಲ್ಲಿ ಸ್ವಚ್ಛತೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡಲು ವ್ಯವಸ್ಥೆ ಮಾಡಿರುವ ಡಿಜಿಟಲ್ ಸ್ಕ್ರಿನ್ ಮೂಲಕ ಉತ್ಸವದ ಪ್ರಚಾರ ಮಾಡಬೇಕು ಎಂದು ಹೇಳಿದರು.

ಬಹುರೂಪಿ ನಾಟಕೋತ್ಸವ ನಡೆಯುವುದರಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಸೆಸ್ಕ್ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಉತ್ಸವದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ವತಿಯಿಂದ ಕ್ರಮ ವಹಿಸಬೇಕು, ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ನಾಟಕೋತ್ಸವದಲ್ಲಿ ಭಾಗವಹಿಸಲು ಅವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ರಂಗಾಯಣ ಪ್ರಾರಂಭವಾಗಿ 35 ವರ್ಷಗಳು ಸಂದಿವೆ. ಬಹುರೂಪಿ ನಾಟಕೋತ್ಸವದಲ್ಲಿ 6 ದಿನಗಳ ಕಾಲ 24 ನಾಟಕಗಳು ಪ್ರದರ್ಶನ ಆಗುತ್ತವೆ. ಸಮಾಜಕ್ಕೆ ಸಂದೇಶ ಸಾರುವಂತಹ ಬೇರೆ ಬೇರೆ ಭಾಷೆಯ ನಾಟಕಗಳು ಇವೆ. ಈ ಬಾರಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವವನ್ನು ಒಂದು ವೇದಿಕೆಯಲ್ಲಿ ಮಾಡಲಾಗುತ್ತದೆ. ಎಲ್ಲ ಇಲಾಖೆಗಳ ಸಹಕಾರ ನೀಡುವ ಮೂಲಕ ನಾಟಕೋತ್ಸವ ಯಶಸ್ಸಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್ ಮಾತನಾಡಿ, ಬಹುರೂಪಿ ನಾಟಕೋತ್ಸವಕ್ಕೆಆಗಮಿಸುವ ಅತಿಥಿಗಳು, ಕಲಾ ತಂಡಗಳು ವಿದ್ವಾಂಸರನ್ನು ಕರೆತರಲು 4 ಮಿನಿ ಬಸ್‌ಗಳು ಹಾಗೂ 3 ಟಾಟಾ ಸುಮೊ ವಾಹನಗಳನ್ನು ಒದಗಿಸಬೇಕು. ಗಣ್ಯರ ವಾಸ್ತವ್ಯಕ್ಕಾಗಿ ವಸತಿಗೃಹಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕಾಯ್ದಿರಿಸಬೇಕು. ಬಹುರೂಪಿ ವಸ್ತುಪ್ರದರ್ಶನದಲ್ಲಿ ಕರಕುಶಲ ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಲೋಕಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಇದ್ದರು.