ಜಿಲ್ಲೆ

ಇನ್ನು ಐದು ವರ್ಷಗಳಲ್ಲಿ ಉತ್ತರ ಕನ್ನಡದಲ್ಲಿ ಸಿದ್ಧವಾಗಲಿದೆ ಐದು ವಾಣಿಜ್ಯ ಬಂದರುಗಳು

Uttara Kannada - Subash Hegde

ಕಾರವಾರ: ಇನ್ನು ಐದು ವರ್ಷಗಳಲ್ಲಿ ಉತ್ತರ ಕನ್ನಡದಲ್ಲಿ 5 ವಾಣಿಜ್ಯ ಬಂದರುಗಳು ಅಭಿವೃದ್ಧಿ ಹೊಂದಲಿವೆ ಎಂದು ಕರ್ನಾಟಕ ಮೆರಿಟೈಮ್ ಬೋರ್ಡ್(ಕೆಎಂಬಿ)ನ ಸಿಇಒ ಜಯರಾಮ್ ರಾಯಪುರೆ ಹೇಳಿದರು.
ಕೆಎಂಬಿ ಕಚೇರಿಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕಡಲ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಶೇ.90 ರಷ್ಟು ಆರ್ಥಿಕತೆ ಸಾಗರ ವಹಿವಾಟಿನ ಮೇಲೆ ನಿಂತಿದೆ. ಆದರೆ, ಕರ್ನಾಟಕ ರಾಜ್ಯ ವಿಳಂಬವಾಗಿ ಎಚ್ಚೆತ್ತುಕೊಂಡು ಈ ಕ್ಷೇತ್ರ ಅಭಿವೃದ್ಧಿಗೆ ಮುಂದಾಗಿದೆ. 2019 ರಲ್ಲಿ ಕರ್ನಾಟಕ ಮೆರಿಟೈಮ್ ಬೋರ್ಡ್ ಸ್ಥಾಪನೆಯಾಗಿದ್ದು, ಹಲವು ಬಂದರುಗಳ ಅಭಿವೃದ್ಧಿಯತ್ತ ಯೋಜನೆ ರೂಪುಗೊಂಡಿದೆ. ಕಾರ್ಯಗತ ಮಾಡುವುದು ಬಾಕಿ ಇದೆ ಎಂದರು.
ಕಾರವಾರ ಬಂದರು 5 ಹಂತದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ 1ಎ ಕಾಮಗಾರಿಯ ಟೆಂಡರ್ ಆಗಿದ್ದು, ಕಾಮಗಾರಿ ಹಸಿರು ನ್ಯಾಯಮಂಡಳಿಯಲ್ಲಿ ವಿಚಾರಣೆ ಹಂತದಲ್ಲಿದೆ. ಮಂಡಳಿ ಆದೇಶ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು. ಸಾಗರ ಮಾಲಾ ಯೋಜನೆಯಲ್ಲಿ 1ಬಿ ಕಾಮಗಾರಿಗೆ ಅನುಮೋದನೆ ದೊರಕಿದ್ದು, ರಾಜ್ಯ ಸರ್ಕಾರ ಅದಕ್ಕೆ ಅನುಮೋದನೆ ನೀಡಬೇಕಿದೆ. ಹಾಲಿ ಬಂದರಿನ ಹೂಳೆತ್ತುವ ಕಾಮಗಾರಿ ಮುಗಿದಿದ್ದು, ದಕ್ಕೆಯನ್ನು ಘಟ್ಟಿಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಅಂಕೋಲಾ ಕೇಣಿಯಲ್ಲಿ ವರ್ಷಕ್ಕೆ 30 ಮೆಟ್ರಿಕ್ ಟನ್ ನಿರ್ವಹಣಾ ಸಾಮರ್ಥ್ಯದ ಬಂದರನ್ನು ಜೆಎಸ್‌ಡಬ್ಲು ನಿರ್ಮಾಣ ಮಾಡುತ್ತಿದೆ. 10 ವರ್ಷದ ಹಿಂದೆಯೇ ಒಪ್ಪಂದವಾದ 5 ಎಂಟಿಪಿಎ ಸಾಮರ್ಥ್ಯದ ಹೊನ್ನಾವರ ಕಾಸರಕೋಡು ಬಂದರು ಕಾಮಗಾರಿಯನ್ನು ಎಚ್‌ಪಿಪಿಎಲ್ ಕಂಪನಿ ಪ್ರಾರಂಭಿಸಿದೆ. ಮಂಕಿಯಲ್ಲಿ 5 ಎಂಟಿಪಿಎ ಹಾಗೂ ಪಾವಿನಕುರ್ವೆಯಲ್ಲಿ 14 ಎಂಟಿಪಿಎ ಸಾಮರ್ಥ್ಯದ ಬಂದರು ನಿರ್ಮಾಣ ಜವಾಬ್ದಾರಿಯನ್ನು ಖಾಸಗಿಗೆ ವಹಿಸಲಾಗುವುದು ಎಂದರು.
ದಕ್ಷಿಣ ಮಂಗಳೂರಿನಲ್ಲಿ ದೇಶದ ಮೊದಲ ಅಂತಾರಾಷ್ಟ್ರೀಯ ಪ್ರವಾಸಿಗರ ಹಡಗಿನ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಹಂಗಾರಕಟ್ಟೆ, ಮಂಗಳೂರು ಸೇರಿ ವಿವಿಧೆಡೆ ಹಡಗು ನಿರ್ಮಾಣ ಕೈಗಾರಿಕೆ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಪೌರಾತ್ಯ ರಾಷ್ಟ್ರಗಳು ಈ ಉದ್ಯಮವನ್ನು ಚೀನಾದ ಬದಲಿಗೆ ಭಾರತಕ್ಕೆ ನೀಡ ಬಯಸುತ್ತಿವೆ. ಅಲ್ಲದೆ ಮೀನುಗಾರಿಕೆಗೆ ಬೆಂಬಲ ನೀಡುವ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕದಂಬ ನೌಕಾನೆಲೆ ಮುಖ್ಯಸ್ಥ ಕಮೊಡೊರ್ ಆಶಿಷ್ ಗೋಯಲ್, ಮಂಗಳೂರಿನ ಡೆಪ್ಯುಟಿ ಚೀಫ್ ಎಕ್ಸ್‌ಪ್ಲೋಸಿವ್‌ ಅಧಿಕಾರಿ ಪಿ.ಕೆ.ರಾಣಾ, ಬಿಣಗಾ ಗ್ರಾಸಿಂ ಇಂಡಸ್ಟ್ರೀಸ್‌ ಮುಖ್ಯಸ್ಥ ಖುಷ್ ಶರ್ಮಾ, ಕೆಎಂಬಿ ಮುಖ್ಯ ಇಂಜಿನಿಯರ್ ಪ್ರಮಿತ್, ಮುಖ್ಯ ಲೆಕ್ಕಾಧಿಕಾರಿ ಡಾ.ಸಂಗೀತಾ ಭಟ್, ಬಂದರು ಅಧಿಕಾರಿ ರಾಜಕುಮಾರ್ ಹೆಗಡೆ, ಹಡಗೊಂದರ ಕ್ಯಾಪ್ಟನ್ ರಾಜವೀರ ಸಿಂಗ್ ವೇದಿಕೆಯಲ್ಲಿದ್ದರು. ಬಂದರು ಇಲಾಖೆ ನಿರ್ದೇಶಕ ಕ್ಯಾ.ಸಿ.ಸ್ವಾಮಿ ಸ್ವಾಗತಿಸಿದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸ್ಥಳೀಯ ಮಾಹಿತಿ ಕೇಂದ್ರ ಸ್ಥಾಪನೆ

ಅತಿಥಿಯಾಗಿದ್ದ ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ, ಸಮುದ್ರದಲ್ಲಿ 12 ನಾಟಿಕಲ್ ಮೈಲ್ ಆಚೆಗಿನ ಭಾಗ ಅಂತಾರಾಷ್ಟ್ರೀಯ ವ್ಯಾಪ್ತಿಗೆ ಬರುತ್ತದೆ. ಅಲ್ಲಿನ ಎಲ್ಲ ವ್ಯವಹಾರಗಳು ಅಂತಾರಾಷ್ಟ್ರೀಯ ಸಮುದ್ರ ಕಾನೂನಿನಂತೆ ನಡೆಯಬೇಕು. ಇದರಿಂದ ಸಮುದ್ರ ವ್ಯವಹಾರಗಳ ಮಾಹಿತಿ ಸಂಗ್ರಹಿಸಲು ಭಾರತವು ಗುರಗಾಂವ್‌ನಲ್ಲಿ ಅಂತಾರಾಷ್ಟ್ರೀಯ ಮಾಹಿತಿ ಹಂಚಿಕೆ ಕೇಂದ್ರವನ್ನು ಪ್ರಾರಂಭಿಸಿದೆ. ಅದರಲ್ಲಿ ನೌಕಾನೆಲೆ, ಕೋಸ್ಟ್‌ ಗಾರ್ಡ್‌ ಸೇರಿ 13 ಭಾಗಿದಾರರಿದ್ದಾರೆ. ಸ್ಥಳೀಯ ಮಾಹಿತಿ ಹಂಚಿಕೆ ಕೇಂದ್ರ ತೆರಯುವ ಪ್ರಸ್ತಾವನೆ ಇದ್ದು, ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕಿದೆ ಎಂದರು.

ಹೊಸ ಪೈಲಟ್ ಬೋಟ್

ಕಾರವಾರ ಬಂದರಿಗೆ ಆಗಮಿಸುವ ಹಡಗುಗಳನ್ನು ಕರೆತರಲು ಇದುವರೆಗೆ ಮೀನುಗಾರಿಕೆ ಬೋಟ್‌ನ್ನು ಪೈಲಟ್ ಬೋಟ್ ಆಗಿ ಬಳಸಲಾಗುತ್ತಿತ್ತು. ಈಗ ಹೊಸ ಪೈಲಟ್ ಬೋಟ್ ಬಳಕೆಗೆ ಟೆಂಡರ್ ಕರೆಯಲಾಗಿದೆ. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರವಾರ ಬಂದರಿನ ಪೈಲಟ್ ಬೋಟ್‌ನಲ್ಲಿ ಕಾರ್ಯನಿರ್ವಹಿಸಿದ ತಾಕು ಹಾಗೂ ಮಹೇಶ ಹರಿಕಂತ್ರ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು.