ಲೋಕ ಅದಾಲತ್​ ಆಯೋಜಿಸಿರುವ ಕುರಿತು ಉಡುಪಿ ಜಿಲ್ಲಾ ನ್ಯಾಯಾಲಯದ ಕಾನ್ಫರೆನ್ಸ್​ ಹಾಲ್​ನಲ್ಲಿ ನ್ಯಾಯಾಧೀಶ ಕಿರಣ ಗಂಗಣ್ಣವರ್​ ಮಾಹಿತಿ ನೀಡಿದರು. ನ್ಯಾಯಾಧೀಶರಾದ ಶ್ರೀನಿವಾಸ್​ ಸುವರ್ಣ, ಪುರುಷೋತ್ತಮ್​, ವಕೀಲರಾದ ರೆನಾಲ್ಡ್​ ಪ್ರವೀಣ್​ಕುಮಾರ್​, ರಾಜೇಶ್​ ಎ.ಆರ್​. ಇದ್ದರು. 
ಜಿಲ್ಲೆ

13ರಂದು ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್​

ನ್ಯಾಯಾಧೀಶ ಕಿರಣ್​ ಗಂಗಣ್ಣವರ್​ ಮಾಹಿತಿ | 30 ಸಾವಿರ ಪ್ರಕರಣ ಇತ್ಯರ್ಥ ಗುರಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 30 ಸಾವಿರ ವ್ಯಾಜ್ಯಪೂರ್ಣ ಪ್ರಕರಣ ಇತ್ಯರ್ಥ ಮಾಡುವ ಗುರಿ ಹೊಂದಿದ್ದು, ಜು.13ರಂದು ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್​ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್​ ಎಸ್​. ಗಂಗಣ್ಣವರ್​ ತಿಳಿಸಿದರು.

ಉಡುಪಿಯ ಜಿಲ್ಲಾ ನ್ಯಾಯಾಯಲಯದ ಕಾನ್ಫರೆನ್ಸ್​ ಹಾಲ್​ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಲೋಕ ಅದಾಲತ್​ ಆಯೋಜಿಸಲಾಗುತ್ತಿದೆ ಎಂದರು.

ಸಾರ್ವಜನಿಕರಿಗೆ ಸುವರ್ಣಾವಕಾಶ

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತಿ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಇದೊಂದು ಸುವರ್ಣಾವಕಾಶ. 15,383 ಸಿವಿಲ್​ ಪ್ರಕರಣು, 15,502 ಕ್ರಿಮಿನಲ್​ ಪ್ರಕರಣ ಇತ್ಯರ್ಥವಾಗಬೇಕಿದೆ. ಜಿಲ್ಲೆಯ ಒಟ್ಟು 21 ನ್ಯಾಯಾಲಯದಲ್ಲಿ ಲೋಕ ಅದಾಲತ್​ ನಡೆಯಲಿದ್ದು, ಉಭಯಪಕ್ಷಗಾರರಿಗೆ ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಮತ್ತು ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್​ ಸುವರ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ್​, ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್​ ಪ್ರವೀಣ್​ಕುಮಾರ್​, ಸಂಘದ ಕಾರ್ಯದರ್ಶಿ ರಾಜೇಶ್​ ಎ.ಆರ್​. ಉಪಸ್ಥಿತರಿದ್ದರು.

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು

ಎಂಎಂಡಿಆರ್​ ಪ್ರಕರಣ, ಚೆಕ್​ ಅಮಾನ್ಯ ಪ್ರಕರಣ, ಬ್ಯಾಂಕ್​ ಸಾಲದ ವಸೂಲಾತಿ, ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣ, ಉದ್ಯೋಗದಲ್ಲಿ ಪುನರ್​ ಸ್ಥಾಪಿಸಲ್ಪಡುವ ಕೇಸ್​, ಕಾರ್ಮಿಕ ವಿವಾದ, ಕೈಗಾರಿಕಾ ಕಾರ್ಮಿಕರ ವೇತನದ ಕ್ಲೇಮ್​ ಕೇಸ್​, ವಿದ್ಯುತ್​ ಹಾಗೂ ನೀರಿನ ಶುಲ್ಕ, ವಿಚ್ಛೇದನ ಹೊರತುಪಡಿಸಿ ವೈವಾಹಿಕ ಹಾಗೂ ಕಟುಂಬ ಪ್ರಕರಣ, ಭೂಸ್ವಾಧೀನ ಪರಿಹಾರ ಹಾಗೂ ಪರಿಹಾರ ಹಂಚಿಕೆ ಪ್ರಕರಣ, ವೇತನ ಮತ್ತು ಭತ್ಯೆಗೆ ಸಂಬಂಧಿತ ಸೇವಾ ಪ್ರಕರಣ, ಪಿಂಚಣಿ ಪ್ರಕರಣ ಹಾಗೂ ಸಿವಿಲ್​ ಕೇಸ್​ಗಳನ್ನು ರಾಜಿ ಮುಖಾಂತರ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ.

ಇಬ್ಬರಿಗೂ ಒಪ್ಪಿಗೆಯಾಗುವಂತೆ ಹಾಗೂ ಅವರಿಬ್ಬರಿಗೂ ಬಾಂಧವ್ಯ ಉಂಟಾಗುವಂತೆ ವಿವಾದ ಬಗೆಹರಿಸಲಾಗುವುದು. ರಾಜಿ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವವರಿಗೆ ನ್ಯಾಯಾಲಯಕ್ಕೆ ಪಾವತಿಸಲಾಗಿರುವ ಶುಲ್ಕವನ್ನೂ ಸಹ ಪೂರ್ಣವಾಗಿ ಮರಳಿ ನೀಡಲಾಗುವುದು. ಕಡಿಮೆ ಖರ್ಚು, ಶೀಘ್ರ ತೀರ್ಮಾನಕ್ಕೆ ಇದು ವಿಶೇಷ ಅವಕಾಶವಾಗಿದೆ. ಪುರುಷೋತ್ತಮ್​.ಸದಸ್ಯ ಕಾರ್ಯದರ್ಶಿ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ