ಜಿಲ್ಲೆ

ಬೆಳಗಾವಿಯಲ್ಲಿ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

ಹುಬ್ಬಳ್ಳಿ: ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಬಸವ ಪರ ಸಂಘಟನೆಗಳ ಸಹಕಾರ ಮತ್ತು ಸಹ ಭಾಗಿತ್ವದಲ್ಲಿ ಜ. 27 ಹಾಗೂ 28ರಂದು ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶವನ್ನು ಬೆಳಗಾವಿಯ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗುರುಬಸವೇಶ್ವರ ಹಾಗೂ ಶಿವಶರಣೆಯರ ಭಾವಚಿತ್ರಗಳನ್ನೊಳಗೊಂಡ ಮತ್ತು ಸರ್ವಾಧ್ಯಕ್ಷೆ ಕೂಡಲಸಂಗಮ ಶ್ರೀ ಬಸವಧರ್ಮಪೀಠಾಧ್ಯಕ್ಷೆ ಶ್ರೀ ಡಾ. ಗಂಗಾ ಮಾತಾಜಿ ಅವರ ಮೆರವಣಿಗೆ ನಡೆಯಲಿದೆ. ನಂತರ ಸಭಾಕಾರ್ಯಕ್ರಮ ಜರುಗಲಿದ್ದು, ನಾಲ್ಕು ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.
ಲಿಂಗಾಯತರ ಬಹುದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರವು ಶ್ರೀ ಗುರು ಬಸವೇಶ್ವರ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರು ಎಂದು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದರು.
ಮಹಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ನಡಕಟ್ಟಿ ಮಾತನಾಡಿ, ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ ಇದಾಗಿದೆ. ಸಾಮೂಹಿಕ ಇಷ್ಟಲಿಂಗ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮಠಾಧೀಶರು, ಸಮಾಜದ ಮುಖಂಡರು, ಸಾಹಿತಿಗಳು ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ ಎಂದರು.
ಸಂಚಾಲಕ ಚಿಂತಾಮಣಿ ಸಿಂಧಗಿ ಮಾತನಾಡಿ, ಹುಬ್ಬಳ್ಳಿಯ ಬಸವವನದಲ್ಲಿದ್ದ ಹಾಗೂ ಸ್ಥಳಾಂತರಗೊಂಡಿರುವ ಶ್ರೀಗುರು ಬಸವೇಶ್ವರರ ಪುತ್ಥಳಿ ಹಾಗೂ ಅಶೋಕ ಸ್ತಂಭವನ್ನು ಬಸವ ವನದಲ್ಲೇ ಸ್ಥಾಪಿಸಬೇಕು. ಹುಬ್ಬಳ್ಳಿಯ ತೋಳನಕೆರೆ ಬಳಿಯ ವೃತ್ತದಲ್ಲಿ ಶ್ರೀಗುರು ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಿ ಅಕ್ಕಮಹಾದೇವಿ ವೃತ್ತವೆಂದು ನಾಮಕರಣ ಮಾಡಬೇಕೇಂದು ಮೇಯರ್ ಹಾಗೂ ಜಿಲ್ಲಾಧಿಕಾರಿಗೆ ವಿನಂತಿಸಲಾಗುವುದು ಎಂದರು. ಬೆಂಗಳೂರಿನಲ್ಲಿರುವ ಮೆಟ್ರೋ ರೈಲ್ವೆಗೆ ಶ್ರೀಗುರು ಬಸವೇಶ್ವರರ ಹೆಸರಿಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ದಾಕ್ಷಾಯಿಣಿ ಕೋಳಿವಾಡ, ಪ್ರೊ.ಜಿ.ಜಿ. ಹಳ್ಯಾಳ, ಬಸವರಾಜ ಲಿಂಗಶೆಟ್ಟರ್, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಾಕ್ಸ್…
ಪಂಚಪೀಠಾಧೀಶರು ಹಿಂದು ಧರ್ಮವೆನ್ನುವ ಬದಲು ಲಿಂಗಾಯತ ಧರ್ಮವೆಂದು ಘೋಷಿಸಬೇಕು. ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು.
-ಎಂ.ವಿ. ಗೊಂಗಡಶೆಟ್ಟಿ, ಧಾರವಾಡ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ