ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಸುದ್ದಿಗೋಷ್ಠಿ ನಡೆಸಿದರು. ಪ್ರಾದೇಶಿಕ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ, ನಿರ್ದೇಶಕರಾದ ಯಾಕೂಬ ಬಿ.ಜತ್ತಿ, ಗುರುನಿಂಗ ಮಾಳಿ, ಪ್ರಕಾಶ ಎಸ್.ಆಯತವಾಡ ಮತ್ತಿತರರಿದ್ದಾರೆ.  
ಜಿಲ್ಲೆ

ದ್ರಾಕ್ಷಿ ಕಣಜದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಎಲ್ಲಿ? ಯಾವಾಗ ಗೊತ್ತಾ?

Vijyapura - Parsuram Bhasagi

ವಿಜಯಪುರ: ದ್ರಾಕ್ಷಿ ಕಣಜ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಸೆ. 21ರಿಂದ ಮೂರು ದಿನಗಳ ಕಾಲ ದ್ರಾಕ್ಷಿ ಬೆಳೆಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ತಿಳಿಸಿದರು.

ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ ಶೇ.70ರಷ್ಟು ದ್ರಾಕ್ಷಿ ವಿಜಯಪುರ ಜಿಲ್ಲೆಯೊಂದರಲ್ಲೇ ಬೆಳೆಯಲಾಗುತ್ತದೆ. ಆದರೆ, ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ವಿಚಾರ ಸಂಕಿರಣದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗೆ ದರ ಏರಿಕೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಬಂಪರ್ ಬೆಲೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಂಪರ್ ದರ ಸಿಕ್ಕಿದ್ದು ಕೇವಲ 10ರಷ್ಟು ರೈತರಿಗೆ ಮಾತ್ರ. ಇನ್ನುಳಿದ ರೈತರಿಗೆ ಯಾವುದೇ ರೀತಿ ಲಾಭವಾಗಿಲ್ಲ. ಇಳುವರಿ ಕುಂಠಿತದಿಂದಾಗಿ ಬೆಲೆ ಹೆಚ್ಚಾಗಿದೆಯೇ ಹೊರತು ಉತ್ಪಾದನೆಗೆ ಅನುಗುಣವಾಗಿ ಲಾಭಾಂಶ ದೊರಕಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಇಳುವರಿಯಲ್ಲಿ ಕುಸಿತಗೊಂಡಿದ್ದನ್ನು ಯಾರೂ ಗಮನಿಸುತ್ತಿಲ್ಲವೆಂದರು.

ಇನ್ನು ವಿದೇಶಗಳಿಂದ ಅಕ್ರಮವಾಗಿ ಒಣದ್ರಾಕ್ಷಿ ಆಮದಾಗುತ್ತಿರುವ ವಿಚಾರ ಸಹ ದ್ರಾಕ್ಷಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಈಗಾಗಲೇ ಈ ಕುರಿತು ಸಂಸದ ರಮೇಶ ಜಿಗಜಿಣಗಿ ಅವರು ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ಕೂಡ ನಡೆಸಿದ್ದಾರೆ. ಹೊರದೇಶಗಳಿಂದ ಅಕ್ರಮವಾಗಿ ಆಮದಾಗುವ ಒಣದ್ರಾಕ್ಷಿಗೆ ತಡೆಯೊಡ್ಡುವುದರ ಜೊತೆಗೆ ದೇಶದಲ್ಲಿ ಉತ್ಪಾದನೆಗೊಳ್ಳುವ ಒಣದ್ರಾಕ್ಷಿಗೂ ಸೂಕ್ತ ಬೆಲೆ ನೀಡಬೇಕೆಂದು ಆಗ್ರಹಿಸಲಾಗಿದ್ದು, ಇದೀಗ ವಿಚಾರ ಸಂಕಿರಣದ ಮೂಲಕವೂ ಒತ್ತಾಯಿಸಲಾಗುವುದೆಂದರು.

ದ್ರಾಕ್ಷಿಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಪುಣೆಯಲ್ಲಿದ್ದು ಅದರಿಂದ ರಾಜ್ಯದ ರೈತರಿಗೆ ಯಾವುದೇ ರೀತಿ ಅನುಕೂಲವಾಗುತ್ತಿಲ್ಲ. ಹೀಗಾಗಿ ಅದರ ಪ್ರಾದೇಶಿಕ ಕೇಂದ್ರ ವಿಜಯಪುರದಲ್ಲಿಯೇ ತೆರೆಯಲು ಒತ್ತಾಯಿಸಲಾಗುವುದು. ಒಣದ್ರಾಕ್ಷಿ ಸಂಗ್ರಹಣೆಗೆ ಇನ್ನೂ 40 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮಿನ ಅವಶ್ಯಕತೆ ಇದ್ದು, ಆ ಕುರಿತು ಸಚಿವರ ಗಮನ ಸೆಳೆಯಲಾಗುವುದು. ಅಲ್ಲದೇ, ಬೆಂಗಳೂರಿನಲ್ಲಿ 1982ರಲ್ಲಿ ಸ್ಥಾಪನೆಗೊಂಡ ಕೇಂದ್ರ ಕಚೇರಿಯ ಒಂದು ಶಾಖೆ ವಿಜಯಪುರದಲ್ಲಿ ತೆರೆಯಲು ಒತ್ತಾಯಿಸಲಾಗುವುದು. ಜೊತೆಗೆ ದ್ರಾಕ್ಷಿ ಬೆಳೆಗಾರರ ಸಂಘವನ್ನು ವಿಸ್ತರಿಸಿ ಲಿಂಬೆ ಮತ್ತು ದಾಳಿಂಬೆ ಬೆಳೆಗಾರರನ್ನು ಒಳಗೊಂಡು ತೋಟಗಾರಿಕೆ ಬೆಳೆಗಾರರ ಸಂಘ ಸ್ಥಾಪಿಸುವ ಕುರಿತು ಸಮಾಲೋಚಿಸಲಾಗುವುದೆಂದರು.

ಉದ್ಘಾಟನೆ ಸಮಾರಂಭದ ವಿವರ

ತಿಕೋಟಾದಲ್ಲಿ ಸೆ. 21ರಿಂದ 23ರವರೆಗೆ ನಡೆಯಲಿರುವ ವಿಚಾರ ಸಂಕಿರಣವನ್ನು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸುವರು ಎಂದು ಸಂಘದ ಪ್ರಾದೇಶಿಕ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ ತಿಳಿಸಿದರು.

ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಸಚಿವ ಡಾ.ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಸಕ್ಕರೆ ಸಚಿವ ಶಿವಾನಂದ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಲಕ್ಷ್ಮಣ ಸವದಿ, ಸಿ.ಎಸ್. ನಾಡಗೌಡ, ಯಶವಂತರಾಯಗೌಡ ಪಾಟೀಲ, ವಿಠಲ ಕಟಕದೊಂಡ, ಭೀಮನಗೌಡ ಬಿ.ಪಾಟೀಲ, ಅಶೋಕ ಎಂ.ಮನಗೂಳಿ, ಸುನೀಲಗೌಡ ಪಾಟೀಲ, ಆನಂದ ನ್ಯಾಮಗೌಡ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಹಲವು ಮುಖಂಡರು, ವಿಜ್ಞಾನಿಗಳು ಮತ್ತು ರೈತ ಮುಖಂಡರು ಪಾಲ್ಗೊಳ್ಳುವರೆಂದು ತಿಳಿಸಿದರು.

ನಿರ್ದೇಶಕರಾದ ಯಾಕೂಬ ಬಿ.ಜತ್ತಿ, ಗುರುನಿಂಗ ಮಾಳಿ, ಪ್ರಕಾಶ ಎಸ್.ಆಯತವಾಡ, ಉಪಾಧ್ಯಕ್ಷ ಭರತೇಶ ಜಮಖಂಡಿ, ಬಿ.ಸಿ. ಮಸಳಿ, ಮುಖಂಡ ಪರಮಾನಂದ ಪಾಟೀಲ ಮತ್ತಿತರರಿದ್ದರು.