ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಏ.11ರಿಂದ 13ರ ವರೆಗೆ ಪ್ರತಿಷ್ಠಿತ ಅಡ್ವೋಕೇಟ್ ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದಿರೇಶ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಪಿ.ಜ್ಯೋತಿಮಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ನಿರ್ದೇಶಕಿ ಪ್ರೊ. (ಡಾ.) ನಿರ್ಮಲಾಕುಮಾರಿ ಕೆ. ಮಾಹಿತಿ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಏ.10ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ರಾಜ್ಯಗಳ 22 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ದಿ. ಪಿ.ಶಿವಾಜಿ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಏ.11ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮೂರು ದಿನದ ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ 20 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಹಾಗೂ ಟ್ರೋಫಿ ಇರಲಿದೆ. ಬೆಸ್ಟ್ ಮೆಮೋರಿಯಲ್ಸ್ಗೆ 5 ಸಾವಿರ ರೂ. ಬೆಸ್ಟ್ ಮೇಲ್ ಹಾಗೂ ಲೇಡಿ ಅಡ್ವೋಕೇಟ್ಗೆ ತಲಾ 3 ಸಾವಿರ ರೂ. ಬಹುಮಾನವಿದೆ. ತೀರ್ಪು ಬರಹ ಸ್ಪರ್ಧೆಗೆ ಪ್ರಥಮ 2,500 ರೂ. ಹಾಗೂ ದ್ವಿತೀಯ 1,500 ರೂ. ಬಹುಮಾನ ನೀಡಲಾಗುತ್ತಿದೆ. ಅಣಕು ಸ್ಪರ್ಧೆಯಲ್ಲಿ ಪ್ರಸಕ್ತ ಕರ್ತವ್ಯದಲ್ಲಿರುವ ಹೈಕೋರ್ಟ್ ನ್ಯಾಯಾಧೀಶರೇ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ ಕೆ.ಎಸ್., ಜಯಂತಿ ಶಿವಾಜಿ ಶೆಟ್ಟಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಶ್ರೀಧರ ಪಿ.ಎಸ್., ಸ್ಪರ್ಧೆಯ ಸಂಯೋಜಕಿ ಸುರೇಖಾ ಕೆ. ಇದ್ದರು.
ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಮತ್ತು ತಿರುವನಂತಪುರದ ಕೇರಳ ಲಾ ಅಕಾಡೆಮಿ ಆಶ್ರಯದಲ್ಲಿ ತಾಪಮಾನ ಏರಿಕೆಯಾಗುತ್ತಿರುವ ಜಗತ್ತಿನಲ್ಲಿ ಹವಾಮಾನ ನ್ಯಾಯ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಜರ್ಮನ್ ದೇಶದ ಪರಿಸರ ಕಾನೂನಿನ ತಜ್ಞರು ಹಾಗೂ ನಮ್ಮ ದೇಶದ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ವಿಚಾರ ಮಂಡಿಸಲಿದ್ದಾರೆ. ಮೇ 10ರಂದು ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ನಡೆಯಲಿದ್ದು, ರಾಜ್ಯ ಕಾನೂನು ವಿವಿ ಉಪಕುಲಪತಿ ಪ್ರೊ. (ಡಾ.) ಸಿ.ಬಸವರಾಜ ಪಾಲ್ಗೊಳ್ಳಲಿದ್ದಾರೆ. ಮೂರು ಚಿನ್ನದ ಪದಕ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 48 ದತ್ತಿ ಬಹುಮಾನ ನೀಡಲಾಗುತ್ತಿದೆ ಎಂದು ಪ್ರೊ. (ಡಾ.) ನಿರ್ಮಲಾಕುಮಾರಿ ಕೆ. ತಿಳಿಸಿದರು.