ಜಿಲ್ಲೆ

ಕ್ರೀಡೆಯಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲಿ: ರಾಷ್ಟ್ರೀಯ ಖೋಖೋ ಕ್ರೀಡಾಪಟು ಬಿ.ಚೈತ್ರಾ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಾಲಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಮುಖ್ಯವಾಗಬೇಕು. ಇದರಿಂದ ಅವರ ಗುರಿ ಸಾಧನೆಗೆ ಸಹಕಾರಿ ಆಗುತ್ತದೆ ಎಂದು ರಾಷ್ಟ್ರೀಯ ಖೋಖೋ ಕ್ರೀಡಾಪಟು ಬಿ.ಚೈತ್ರಾ ಸಲಹೆ ನೀಡಿದರು.

ನಗರದ ಎಂ.ಒ.ಬಿ ಸಮುದಾಯ ಭವನದಲ್ಲಿ ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ, ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವುದರ ಜತೆಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಯ ಕಡೆ ಗಮನ ಹರಿಸಬೇಕು. ಕ್ರೀಡಾ ಮನೋಭಾವದಿಂದ ವಿದ್ಯಾರ್ಥಿಗಳು ಒಲಂಪಿಕ್‌ನಲ್ಲಿ ಆಡುವ ಕನಸು ಹೊತ್ತುಕೊಂಡು ಮುನ್ನಡೆದರೆ ಗೆಲವು ಸಿಕ್ಕೇ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಅಗತ್ಯ ಸೇವೆಗಳನ್ನು ನೀಡಬೇಕು. ಹೆಣ್ಣು ಮಕ್ಕಳು ಸ್ವಸಾಮರ್ಥ್ಯ ಬೆಳೆಸಿಕೊಳ್ಳುವಂತಹ ಕಲೆಗಳನ್ನು ಕಲಿಸಿಕೊಡಬೇಕು. ವಿದ್ಯಾರ್ಥಿಗಳು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂದು ತಿಳಿಸಿದರು.

ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್.ಕೆ.ಶಿವಪ್ರಕಾಶ್‌ಬಾಬು, ಆಯೋಜಕ ಲೋಕೇಶ್ ಮೊದಲಿಯಾರ್, ತೀರ್ಪುಗಾರರಾದ ವಿನಯ್‌ಕುಮಾರ್, ವೆಂಕಟೇಶ್, ಪ್ರೇಮ್‌ಕುಮಾರ್, ಮನು ಇದ್ದರು. ಇದೇ ವೇಳೆ ಹಿರಿಯ ಕರಾಟೆ ಶಿಕ್ಷಕರಾದ ಗೋಪಿದಾಸ್, ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.