ಜಿಲ್ಲೆ

ಸಾಣೇಹಳ್ಳಿ ಶ್ರೀಗಳಿಗೆ ನಮೋ ಪತ್ರ

ಧನಂಜಯ ಎಸ್.ಹಕಾರಿ.

ಹೊಸದುರ್ಗ: ಬಸವಣ್ಣನ ವಚನಗಳನ್ನು ಹಿಂದಿ ಭಾಷೆಯಲ್ಲಿ ನೃತ್ಯ ಮತ್ತು ಸಂಗೀತದ ಮೂಲಕ ದೇಶದ ಜನರಿಗೆ ತಲುಪಿಸುವ ಕಾರ್ಯ ಕೈಗೊಂಡಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಯ ಕಾರ್ಯ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಶ್ರೀಗಳು ರೂಪಿಸಿರುವ ತುಮಾರೆ ಸಿವಾ ಔರ್ ಕೋಯಿ ನಹಿ ಎನ್ನುವ ಹೆಸರಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಅಭಿಯಾನದ ಪ್ರದರ್ಶನ ಬಗ್ಗೆ ತಿಳಿದು ನನಗೆ ಸಂತೋಷವಾಗಿದೆ.

ಮನೋರಂಜನೆಯ ಮೂಲಕ ಜಾಗೃತಿ ಮೂಡಿಸುತ್ತಿರುವ ಈ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದಿದ್ದಾರೆ.

ಆಧ್ಯಾತ್ಮಿಕ ವ್ಯಕ್ತಿಗಳು ಶತಮಾನಗಳಿಂದ ನಮ್ಮ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದಾರೆ.

ಜವಾಬ್ದಾರಿ ಮತ್ತು ನ್ಯಾಯದ ನಡವಳಿಕೆಯ ಹಾದಿಯಲ್ಲಿ ನಡೆಯಲು ಜನರಿಗೆ ಮಾರ್ಗದರ್ಶನ ನೀಡುವ ಜತೆಗೆ ತಮ್ಮ ಆಳವಾದ ತಿಳುವಳಿಕೆ ಮತ್ತು ಜ್ಞಾನದ ಮೂಲಕ ಜನರ ಮನಸ್ಸನ್ನು ಪೋಷಿಸುತ್ತಿದ್ದಾರೆ.

ಅಂಥವರಲ್ಲಿ ಬಸವೇಶ್ವರರು ಶ್ರೇಷ್ಠರು. ಅವರ ಜೀವನ ಮತ್ತು ಆದರ್ಶಗಳು ಮಾನವೀಯ ಮತ್ತು ಪ್ರಾಯೋಗಿಕವಾಗಿ ಮಾರ್ಗದರ್ಶಿಯಾಗಿವೆ.

ಆಲೋಚನೆಗಳು ಅವರ ಸಮಯಕ್ಕಿಂತ ಬಹಳ ಮುಂದಿದ್ದವು ಎನ್ನುವುದಕ್ಕೆ ಶತಮಾನಗಳು ಉರುಳಿದಂತೆ ಅವರ ವಚನಗಳು ಹೆಚ್ಚಿನ ಪ್ರಸ್ತುತತೆ ಗಳಿಸುತ್ತಾ,

ಸಮಯದ ಪರೀಕ್ಷೆಗೆ ನಿಂತಿರುವುದು ಸಾಕ್ಷಿಯಾಗಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಬಸವೇಶ್ವರರು ಮಾನವ ಜೀವನದ ಪ್ರತಿಯೊಂದು ಸಮಾಜ, ಸಂಸ್ಕೃತಿ ಅಥವಾ ರಾಜಕೀಯ ಅಂಶಗಳನ್ನು ಪ್ರಭಾವಿಸಿದ್ದಾರೆ.

ಅವರ ಬೋಧನೆ ನಮಗೆ ಉತ್ತಮ ಮಾನವರಾಗಲು ಮತ್ತು ಸಮಾಜವನ್ನು ಬಲಿಷ್ಠ, ದಯೆ ಮತ್ತು ಹೆಚ್ಚು ಸಹಾನುಭೂತಿಯಿಂದ ವರ್ತಿಸಲು ಪ್ರೇರೇಪಿಸುತ್ತವೆ.

ಬಸವಣ್ಣನ ಉದಾತ್ತ ಬೋಧನೆಗಳು ವಚನಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿವೆ.

ಸಾಣೇಹಳ್ಳಿ ಶ್ರೀಗಳ ಪ್ರಯತ್ನಗಳಿಂದ ಈ ವಚನಗಳು ಈಗ ನೃತ್ಯದಂತಹ ವಿಭಿನ್ನ ಅಭಿವ್ಯಕ್ತಿ ಕಲೆಯ ಮೂಲಕ ಜನರನ್ನು ತಲುಪುತ್ತಿರುವುದು ವಿಶೇಷ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಬಸವಣ್ಣನವರ ವಚನಗಳಲ್ಲಿ ಆಳವಾಗಿ ಬೇರೂರಿರುವ ಜ್ಞಾನಸಂಪತ್ತನ್ನು ನೃತ್ಯ ಕಲಾವಿದರು ಯಶಸ್ವಿಯಾಗಿ ಪ್ರದರ್ಶಿಸಲಿ.

ಪ್ರದರ್ಶನದ ಭಾಷೆ ಹಿಂದಿಯಾಗಿರುವುದರಿಂದ ಬಸವೇಶ್ವರರ ಸಂದೇಶವನ್ನು ವ್ಯಾಪಕವಾಗಿ ಹರಡಲು ಸಹಾಯವಾಗುತ್ತದೆ.

ಈ ಉದಾತ್ತ ಕಲಾಕೃತಿಯೊಂದಿಗೆ ಸಹಕರಿಸಿದ ಎಲ್ಲರಿಗೂ ಶುಭಾಶಯ ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ರಧಾನಿ ವೀಕ್ಷಿಸುವ ಸಾಧ್ಯತೆ ಇತ್ತು: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ದೆಹಲಿ ನಿವಾಸದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ,

ಭಗವಂತ ಖೂಬಾ ಇತರರು, ಪ್ರಧಾನಿ ಅವರು ಪ್ರದರ್ಶನ ನೋಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು ಎಂದು ಸಾಣೇಹಳ್ಳಿ ಸ್ವಾಮೀಜಿ ಹೇಳಿದ್ದಾರೆ. ಆದರೆ, ವಿವಿಧ ಕಾರಣಕ್ಕೆ ಕಾರ್ಯರೂಪಕ್ಕೆ ಬರಲಿಲ್ಲ.

ಅವರೆಲ್ಲರೂ ರೂಪಕದ ಕುರಿತು ಮೋದಿ ಅವರ ಬಳಿ ಚರ್ಚಿಸಿರಬೇಕು. ಅದಕ್ಕೆ ಮೆಚ್ಚಿ ಪತ್ರ ಬರೆದಿದ್ದಾರೆ ಎಂಬುದು ನಮ್ಮ ಭಾವನೆ. ಅವರ ಪತ್ರ ನಮಗೆ ಸಂತಸ ತಂದಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಜು.2ರಂದು ಚಾಲನೆ ಪಡೆದಿತ್ತು: ಶಿವಕುಮಾರ ಕಲಾಸಂಘದ ಮೂಲಕ ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ವಚನ ಸಾಂಸ್ಕೃತಿಕ ಪ್ರಥಮ

ಅಭಿಯಾನಕ್ಕೆ ಜುಲೈ 2 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ಆಂಧ್ರಪದೇಶ, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ, ಉತ್ತರಾಖಂಡ, ಚಂಡೀಗಢ ರಾಜ್ಯಗಳ 29 ಪ್ರಮುಖ ಸ್ಥಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ನೀಡಿದೆ.