ಜಿಲ್ಲೆ

ಮೈಸೂರಿನಲ್ಲಿ ರಾಷ್ಟ್ರಮಟ್ಟದ 35 ಜತೆ ನಾಡಕುಸ್ತಿ ಪಂದ್ಯಾವಳಿ

ಮೈಸೂರು: ಅಶೋಕಪುರಂ ಪೈಲ್ವಾನ್ ಪುರುಷೋತ್ತಮ್ ಅಭಿಮಾನಿಗಳ ಬಳಗದಿಂದ ನ.17ರಂದು ಮಧ್ಯಾಹ್ನ 3 ಗಂಟೆಗೆ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ 35 ಜತೆ ನಾಡಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಪೈಲ್ವಾನ್ ಸುನಿಲ್‌ಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಕುಸ್ತಿ ಪಂದ್ಯಾವಳಿಯ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರದ ಪೈ.ಸುನಿಲ್ ಜಾಧವ್ ಮತ್ತು ಇಂಗಳಗಿ ಪೈ.ಪ್ರಕಾಶ್, ರಮ್ಮನಹಳ್ಳಿ ಪೈ.ರವಿ ಮತ್ತು ದಾವಣಗೆರೆಯ ರಾಘವೇಂದ್ರ, ಪೈ.ರೋಷನ್ ಮತ್ತು ದಾವಣಗೆರೆಯ ಪೈ. ಕಿರಣ್, ಮುಧೋಳದ ಪೈ. ರೋಹನ್ ಗವಾಡೆ ಮತ್ತು ಪೈ. ಬಸವರಾಜ ಪಾಟೀಲ್ ಪ್ರಮುಖ ಕುಸ್ತಿಗಳಾಗಿವೆ ಎಂದು ವಿವರಿಸಿದರು.

ಅಂದು ಮಧ್ಯಾಹ್ನ 1 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಾನಪದ ಕಲಾ ತಂಡಗಳೊಂದಿಗೆ ಪೈಲ್ವಾನರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದರು.

ಮಹಾರಾಜರ ಕಾಲದಿಂದಲೂ ಕುಸ್ತಿ ಕಲೆಗೆ ಹೆಸರಾಗಿದ್ದ ಮೈಸೂರಿನಲ್ಲಿ ಇತ್ತೀಚೆಗೆ ನಶಿಸುತ್ತಿದೆ. ಕುಸ್ತಿ ಉಳಿವಿಗಾಗಿ ಹೋರಾಟ ನಡೆಸಿದ ಹಿರಿಯರನ್ನು ಸ್ಮರಿಸಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.

ಸಂಘಟಕರಾದ ಹರಿದಾದ್, ಎಚ್.ನಾಗರಾಜ್, ಛಲವಾದಿ ಸಂಘದ ನಗರಾಧ್ಯಕ್ಷ ಶಿವು ಇತರರಿದ್ದರು.