ಜಿಲ್ಲೆ

ಹಿತ್ತಲಮಕ್ಕಿಗೆ ರಾಷ್ಟ್ರೀಯ ಗೌರವ ಪುರಸ್ಕಾರ

ಬಸವರಾಜ ವೀರಪ್ಪ ಗರಗ

ಗೋಕರ್ಣ: ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮತ್ತು ರಾಷ್ಟ್ರೀಯ ಆರೋಗ್ಯ ಮತ್ತು ನೈಸರ್ಗಿಕ ಅಭಿವೃದ್ಧಿ ಸಂಘದ ವತಿಯಿಂದ ಬೆಳಗಾವಿಯ ಧರ್ಮನಾಥ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಷ್ಠಾನದ ಪ್ರಮುಖ ಮತ್ತು ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ಅವರು ಹೋಟೆಲ್ ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಅವರಿಗೆ ‘ಆದರ್ಶ ಉದ್ಯೋಗರತ್ನ ರಾಷ್ಟ್ರೀಯ ಗೌರವ ಪುರಸ್ಕಾರ’ ಪ್ರದಾನ ಮಾಡಿದರು.

ದಿಲ್ಲಿ, ಗುಜರಾತ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಘಟನೆ ಈ ರಾಜ್ಯಗಳಲ್ಲಿನ ಹಲವಾರು ಗಣ್ಯ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಶಿಫಾರಸಿನ ಮೇರೆಗೆ ನಿಮ್ಮ ಅವಿಸ್ಮರಣೀಯ ಮತ್ತು ನಿಸ್ವಾರ್ಥ ಸೇವೆ ಪರಿಗಣಿಸಿ ಈ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಇದರಿಂದ ನಿಮ್ಮ ಗೌರವ ಹೆಚ್ಚಿಸಲು ಮತ್ತು ತಮ್ಮ ಆದರ್ಶ ಇನ್ನೊಬ್ಬರಿಗೆ ಸ್ಪೂರ್ತಿಯಾಗಲಿ, ಮುಂಬರುವ ದಿನಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ನೀವು ಇನ್ನಷ್ಟು ತೊಡಗಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಪುರಸ್ಕಾರ ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿತ್ತಲಮಕ್ಕಿ ಅವರು ಗೋಕರ್ಣ ಗ್ರಾಮಾಂತರದ ಸಾಣೆಕಟ್ಟೆಯ ಸದ್ಗುರು ಶ್ರೀ ನಿತ್ಯಾನಂದ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಪಂಚಾಯಿತಿ ಮಾಜಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸಮಾರಂಭದಲ್ಲಿ ಪ್ರತಿಷ್ಠಾನದ ಪ್ರಮುಖರಾದ ಗೋವಾ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೆಕರ್,ಬ್ಯಾರಿಸ್ಟರ್ ಅಮರಸಿಂಹ ಪಾಟೀಲ, ಮಾಜಿ ಕೇಂದ್ರ ಸಚಿವೆ ರತ್ನಮಾಲಾ ಸವಣೂರ, ಇತರರಿದ್ದರು.