ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ ಸಂಚಾರ ಸವಾರರಿಗೆ ದುಸ್ತರ

ಕೋಲಾರ ಡೆಸ್ಕ್

ಎ.ಅಪ್ಪಾಜಿಗೌಡ ಮುಳಬಾಗಿಲು

ನಂಗಲಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ&-75ರ ಮೇಲ್ಸೇತುವೆ, ನರಸಿಂಹ ತೀರ್ಥದಲ್ಲಿ ಕೆಳಸೇತುವೆ ನಿಮಾರ್ಣ ಕಾಮಗಾರಿ ಆರಂಭಗೊಂಡು 2 ವರ್ಷವಾದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸದಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಸುತ್ತಮುತ್ತಲಿನ ಜನರಿಗೆ ಓಡಾಡಲು ಸುಸಜ್ಜಿತ ರಸ್ತೆ ಇಲ್ಲದೇ ಗೊಣಗಾಡುವಂತಾಗಿದೆ.

ಹೆದ್ದಾರಿಯಲ್ಲಿ ಸಂಚರಿಸುವವರು ಪ್ರಾಣ ಕೈಯಲ್ಲಿಟ್ಟುಕೊಂಡು ಹೋಗಬೇಕಾದ ಪರಿಸ್ಥಿತಿ ಉದ್ಭವವಾಗಿದ್ದು, ಈ ಬಗ್ಗೆ ಹೇಳುವರು, ಕೇಳುವರು ಯಾರೂ ಇಲ್ಲದಂತಾಗಿದೆ. ಮುಂದುವರಿದ ಕಾಮಗಾರಿ ಸ್ಥಳಗಳಲ್ಲಿ ನಾಮಲಕ ಹಾಕದೇ ಇರುವುದರಿಂದ ಅಪಘಾತಗಳಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಡವರು, ರೈತರು ಸೇರಿ ಶ್ರೀಸಾಮಾನ್ಯರು ದ್ವಿಚಕ್ರ ವಾಹನಗಳು, ಸಾಮಾನ್ಯ ವಾಹನಗಳಲ್ಲಿ ಸಂಚರಿಸುವಾಗ ಭಾರಿ ಮತ್ತು ಅತಿ ವೇಗವಾಗಿ ಬರುವ ವಾಹನಗಳಿಗೆ ಬಲಿಯಾಗುತ್ತಿವುದು ಹೆಚ್ಚುತ್ತಿದೆ.

ಇನ್ನೂ ವೀಕೆಂಡ್​ಗಳಲ್ಲಿ ನಂಗಲಿ, ಎನ್​.ವಡ್ಡಹಳ್ಳಿಗಳಲ್ಲಿ ಭಾನುವಾರ ಮದ್ಯಾಹ್ನದಿಂದ ರಾತ್ರಿ 8 ಗಂಟೆಗಳಲ್ಲಿ ವಿಪರೀತ ಟ್ರಾಫಿಕ್​ ಜಾಮ್​ ಕಂಡು ಬರುತ್ತದೆ. ಆಂಧ್ರಪ್ರದೇಶದ ತಿರುಮಲ ತಿರುಪತಿ, ಶ್ರೀ ಕಾಳಹಸ್ತೀ ಶ್ರೀ ಜ್ಞಾನಪ್ರಸಂಭಾ ದೇವಿ ಸಮೇತ ಪ್ರಸನ್ನ ಶ್ರೀ ಕಾಳಸೇಶ್ವರ ದೇವಾಲಯ, ಕಾಣಿಪಾಕ ವಿನಾಯಕ, ತಿರುತಣಿ ಸುಬ್ರಮಣ್ಯೇಶ್ವರ, ಕಂಚಿ ಕಾಮಾಕ್ಷಿ ದೇವಿ , ವರದರಾಜಸ್ವಾಮಿ, ಬೋಯಿಕೊಂಡ ಗಂಗಮ್ಮ ದೇವಾಲಯಗಳಿಗೆ ಹೋಗಿ ಬರುವ ಭಕ್ತಾದಿಗಳು ಭಾನುವಾರ ಸಂಜೆ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಬರುವುದರಿಂದ ಈ ಕಿರಿದಾದ ರಸ್ತೆಯಲ್ಲಿ 300 ಮೀಟರ್​ ದಾಟಲು ಅರ್ಧ ಗಂಟೆಯಿಂದ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿ, ಶ್ರೀ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

"ಹೆದ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶ್ರೀ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಗುತ್ತಿಗೆದಾರರು ಗುತ್ತಿಗೆ ಮುಗಿಸುವ ಅವಧಿ 2025ರ ಮೇ -31ರ ವರೆಗೂ ತೆಗೆದುಕೊಂಡಿದ್ದು ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು."

- ಸಮೃದ್ಧಿ ವಿ.ಮಂಜುನಾಥ್​ ಶಾಸಕ, ಮುಳಬಾಗಿಲು

"ನರಸಿಂಹತೀರ್ಥ, ಎನ್​. ವಡ್ಡಹಳ್ಳಿ, ನಂಗಲಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಗುತ್ತಿಗೆದಾರರು ಉಪಗುತ್ತಿಗೆ ನೀಡಿ ಈ ಬಗ್ಗೆ ಗಮನಹರಿಸುತ್ತಿಲ್ಲ, ಇದರಿಂದ ಸ್ಥಳಿಯರಷ್ಟೇ ಅಲ್ಲ ಹೆದ್ದಾರಿ ಪ್ರಯಾಣಿಕರು, ವಾಹನ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಸಂಸದರು, ಶಾಸಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು, ಆಗಲೇ ಸಮಸ್ಯೆ ಇತ್ಯರ್ಥಸಾಧ್ಯ."

- ಮೊತಕಪಲ್ಲಿ ಎಂ.ವಿ.ಜಗದೀಶ್​

ಪಿಡಬ್ಲ್ಯೂಡಿ ವಿಶ್ರಾಂತ ಪ್ರಥಮಧರ್ಜೆ ಗುತ್ತಿಗೆದಾರ,ಮುಳಬಾಗಿಲು

"ಎನ್​. ವಡ್ಡಹಳ್ಳಿ ಯಲ್ಲಿ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ. ತಿರುವುಗಳ ಬಗ್ಗೆ ಗೊಂದಲ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಟ್ಯಾಗ್​ ಮಾಡಿ ಸಮಸ್ಯೆ ಬಗ್ಗೆ ತಿಳಿಸಲಾಗಿದೆ , ಸಮಸ್ಯೆ ಬಗೆಹರಿಸಿಲ್ಲ."

- ರಾಮಕಿಶೋರ್​

ನಂಗಲಿ, ಮುಳಬಾಗಿಲು ತಾಲೂಕು