ವಿಜಯವಾಣಿ ಸುದ್ದಿಜಾಲ ಉಡುಪಿ
ರಾಷ್ಟ್ರೀಯ ಹೆದ್ದಾರಿ ಪಾಧಿಕಾರದ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ, ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಹಾಗೂ ಅಭಿಯಂತರರಿಗೆ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಅ.14) ಆಯೋಜಿಸಿದ್ದ ರಾ.ಹೆ.-66 ಮತ್ತು 169ಎ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಂತೆಕಟ್ಟೆ ಕಲ್ಯಾಣಪುರದಲ್ಲಿ ಕಾಮಗಾರಿ ಪ್ರಗತಿ ಹೆಚ್ಚಿಸಿ ಶೀಘ್ರ ಸಂಪೂರ್ಣಗೊಳಿಸಬೇಕು. ಅಂಬಲಪಾಡಿ ಜಂಕ್ಷನ್ನಲ್ಲಿ ಮೇಲ್ಸೇತುವೆ ಕಾಮಗಾರಿಯಿಂದಾಗಿ ಗೋಪುರದ ಬಳಿ ವಾಹನ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ನಿಗದಿತ ಕಾಲಾವಧಿಯಲ್ಲಿ ಕೆಲಸ ಮುಗಿಸಬೇಕು. ಕಟಪಾಡಿಯಲ್ಲೂ ಸಹ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ನವೆಂಬರ್ ಮೊದಲ ವಾರದಿಂದ ಪ್ರಾರಂಭಿಸಬೇಕು. ವಾಹನ ಸಂಚಾರಕ್ಕೆ ತೊಡಕಾದಂತೆ ಸರ್ವಿಸ್ ರಸ್ತೆಯಲ್ಲಿ ಅಗತ್ಯ ಕ್ರಮ ವಹಿಸಿ. ನಾಳೆಯಿಂದಲೇ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ಹಾಗೂ ಇಲಾಖೆ ಅನುಮತಿಯೊಂದಿಗೆ ಮರಗಳ ತೆರವು ಮಾಡಬೇಕು ಎಂದರು.
ಕಾರ್ಕಳ ತಾಲೂಕಿನ 169ಎ ಗೆ ಸಂಬಂಧಿಸಿ ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ ಫುಲ್ಕೇರಿ ಬೈಪಾಸ್ ಮುರತ್ತಂಗಡಿ ಪದವಿ ಪೂರ್ವ ಕಾಲೇಜಿನವರೆಗೆ 6 ಬಸ್ ನಿಲ್ದಾಣಗಳಿವೆ. ಅವುಗಳ ಪುನರ್ ನಿರ್ಮಾಣ ಕಾರ್ಯ ನಡೆಸಿ. ಕಾಲೇಜಿನ ಬಳಿ ರಕ್ಷಣಾ ತಡೆಗೋಡೆ ನಿರ್ಮಿಸಬೇಕು. ಆ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ ಪೂರ್ಣಗೊಂಡಿದ್ದು, ತ್ವರಿತವಾಗಿ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣಕುಮಾರ್ ಕೊಡ್ಗಿ, ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಡಿಎಫ್ಒ ಗಣಪತಿ, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಗುತ್ತಿಗೆದಾರರು, ಅಭಿಯಂತರರು ಉಪಸ್ಥಿತರಿದ್ದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಬೀದಿ ದೀಪ ಅಳವಡಿಸಬೇಕು. ಈಗಾಗಲೇ ಗುರುತಿಸಿರುವ 22 ಬ್ಲ್ಯಾಕ್ ಸ್ಪಾಟ್ಗಳಲ್ಲಿ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡು ಅಪಘಾತಗಳ ಸಂಖ್ಯೆ ಕಡಿಮೆಗೊಳಿಸಲು, ಅಪಘಾತ ಮುಕ್ತ ವಲಯವಾಗಿಸಲು ಕಳೆದ ಸಭೆಯಲ್ಲಿ ಸೂಚಿಸಿದ್ದೆ. ಕಾಪು, ಪಡುಬಿದ್ರಿಯ ಹೊರತಪಡಿಸಿ ಬಾಕಿ ಉಳಿದ ಬ್ಲ್ಯಾಕ್ ಸ್ಪಾಟ್ಗಳಲ್ಲಿ ಕಾಮಗಾರಿ ಕೈಗೊಂಡಿಲ್ಲ. ಕೇವಲ ಟೋಲ್ ವಸೂಲಿಗೆ ಸೀಮಿತವಾಗದೆ ಹೆದ್ದಾರಿ ನಿರ್ವಹಣೆಯನ್ನೂ ಸರಿಯಾಗಿ ಮಾಡಬೇಕು ಓವರ್ ಸ್ಪೀಡ್ ವಾಹನ ಗುರುತಿಸಲು ಪೊಲೀಸ್ ಇಲಾಖೆ ಕ್ಯಾಮರಾ ಅಳವಡಿಕೆ ಮಾಡಲಿದ್ದು, ಅಗತ್ಯವಿರುವ ವಿದ್ಯುತ್ ಇನ್ನಿತರ ಸೌಲಭ್ಯ ಒದಗಿಸಿ ಎಂದು ಹೆದ್ದಾರಿ ಅಧಿಕಾರಿಗಳಿಗೆ ಸಂಸದ ಪೂಜಾರಿ ಸೂಚಿಸಿದರು.
ಮಲ್ಪೆಯಿಂದ ಕರಾವಳಿ ಜಂಕ್ಷನ್ವರೆಗೆ 22 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಗತ್ಯವಿರುವ ಬಾಕಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭೂ ಮಾಲೀಕರಿಗೆ ಕೂಡಲೇ ವೈಜ್ಞಾನಿಕವಾಗಿ ಪರಿಹಾರದ ಹಣ ನೀಡಲು ಕ್ರಮ ವಹಿಸಬೇಕು. | ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ