ಜಿಲ್ಲೆ

ಸಂಚಾರಕ್ಕಾಗದ ಸರ್ವೀಸ್ ರಸ್ತೆ

ಭರತ್ ಶೆಟ್ಟಿಗಾರ್ ಮಂಗಳೂರು

ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ಸರ್ವೀಸ್ ರಸ್ತೆ ಹಲವು ಸಮಯದಿಂದ ದುರಸ್ತಿಯಾಗದೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿದೆ.

ಕೊಟ್ಟಾರ ಚೌಕಿಯಿಂದ ಮಂಗಳೂರು ಕಡೆ ಬರುವಾಗ ಲೋಹಿತ್‌ನಗರ ಬಳಿ ಫ್ಲೈಓವರ್ ಬದಿಯಲ್ಲೇ ಎಡಗಡೆ ಬಿಎಂಎಸ್ ಹೋಟೆಲ್, ಅದ್ವೈತ್ ಹುಂಡೈ, ಭಾರತ್ ಆಟೋ ಕಾರ್ಸ್‌ ಮುಂಭಾಗ ಈ ಸರ್ವೀಸ್ ರಸ್ತೆ ಹಾದು ಹೋಗುತ್ತದೆ. ಕುಂಟಿಕಾನ ಜಂಕ್ಷನ್ ದಾಟಿ ಎ.ಜೆ.ಆಸ್ಪತ್ರೆ, ಅಗ್ನಿಶಾಮಕ ದಳ ಕದ್ರಿ ಠಾಣೆ ಮುಂಭಾಗವಾಗಿ ಮತ್ತೆ ಹೆದ್ದಾರಿಗೆ ಸೇರುತ್ತದೆ. ದೇರೆಬೈಲ್, ಕೊಂಚಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಡೆಗೆ ಹೋಗಲು ಇದೇ ರಸ್ತೆಯಲ್ಲಿ ಸಾಗಬೇಕು.

ಒಳಚರಂಡಿ ಕಾಮಗಾರಿಗಾಗಿ ಮಹಾನಗರ ಪಾಲಿಕೆಯಿಂದ ರಸ್ತೆ ಮಧ್ಯೆ ಗುಂಡಿ ತೋಡಿ, ಪೈಪ್ ಅಳವಡಿಸಿ ಮಣ್ಣು ಹಾಕಿ ಮುಚ್ಚಲಾಗಿದೆ. ರಸ್ತೆಗೆ ಮರು ಡಾಂಬರು ಹಾಕುವ ಕಾಮಗಾರಿ ವರ್ಷ ಕಳೆದರೂ ನಡೆದಿಲ್ಲ. ಕೆಲವು ದಿನಗಳ ಹಿಂದೆ ರಸ್ತೆಗೆ ಜಲ್ಲಿ, ಸಿಮೆಂಟ್ ಮಿಕ್ಸ್ ಹಾಕಲಾಗಿದ್ದು, ಅದು ಮಳೆಗೆ ಎದ್ದು ಹೋಗಿ ಹೊಂಡಗಳು ನಿರ್ಮಾಣವಾಗಿವೆೆ. ಇಲ್ಲಿ ಆಂಬುಲೆನ್ಸ್‌ಗಳ ಚಾಲನೆಯಂತೂ ಸವಾಲು. ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾದರೆ ಧೂಳಿನ ಸಮಸ್ಯೆ ಉಂಟಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಗುಂಡಿಗಳೇ ತುಂಬಿರುವ ಕೂಳೂರು ರಸ್ತೆ

ಕೂಳೂರು ಮೇಲ್ಸೇತುವೆ ಸರ್ವೀಸ್ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿ ಕೂಳೂರಿನಿಂದ ಕೋಡಿಕಲ್ ತನಕ ಸಾಗುವುದೇ ಕಷ್ಟ. ರಸ್ತೆ ತುಂಬ ಹೊಂಡ -ಗುಂಡಿಗಳೇ ತುಂಬಿದ್ದು ಯಾವ ಗುಂಡಿ ತಪ್ಪಿಸಲೂ ಆಗದ ಸ್ಥಿತಿ ಇದೆ. ಈ ನಡುವೆ ಸರ್ವೀಸ್ ರಸ್ತೆ ಬದಿ ರಾತ್ರಿ ವೇಳೆ ಹಲವು ಸರಕು ಸಾಗಾಟ ಲಾರಿ, ಟ್ಯಾಂಕರ್‌ಗಳನ್ನು ನಿಲ್ಲಿಸಿ ಚಾಲಕರು ವಿಶ್ರಾಂತಿ ಪಡೆಯುತ್ತಾರೆ. ಅರ್ಧ ರಸ್ತೆಯವರೆಗೆ ಇವು ಅತಿಕ್ರಮಿಸಿ ನಿಲ್ಲುವುದರಿಂದ ಲಘು ವಾಹನಗಳಿಗೆ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ತಡರಾತ್ರಿ ದ್ವಿಚಕ್ರ ವಾಹನಗಳಲ್ಲಿ ತೆರಳುವವರ ದರೋಡೆಯಂಥ ಘಟನೆಗಳೂ ನಡೆದಿವೆ.

ಕುಂಟಿಕಾನ ಸರ್ವೀಸ್ ರಸ್ತೆಗೆ ಡಾಂಬರು ಹಾಕಿ ಸಂಚಾರಕ್ಕೆ ಯೋಗ್ಯ ಮಾಡುವ ಕೆಲಸ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು. ಈ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಜತೆಗೆ ಪಂಪ್‌ವೆಲ್ ಹಾಗೂ ಕೂಳೂರು ಸರ್ವೀಸ್ ರಸ್ತೆಯ ದುರಸ್ತಿಗೂ ಆಗ್ರಹಿಸಿದ್ದೇವೆ.

ದಿವಾಕರ್ ಪಾಂಡೇಶ್ವರ, ಮಂಗಳೂರು ಮೇಯರ್

ಒಳಚರಂಡಿ ಪೈಪ್ ಅಳವಡಿಸಲು ಕುಂಟಿಕಾನ ಸರ್ವೀಸ್ ರಸ್ತೆಯನ್ನು ಅಗೆಯಲಾಗಿತ್ತು. ಆದರೆ ಕಾಮಗಾರಿ ಮುಗಿದ ಬಳಿಕ ರಸ್ತೆಯನ್ನು ದುರಸ್ತಿ ಮಾಡುವ ಕೆಲಸ ನಡೆದಿಲ್ಲ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಸ್ಮಾರ್ಟ್ ಸಿಟಿ ಎನ್ನುವ ಹೆಸರಿಗೆ ತಕ್ಕಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.

ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತ