ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಮುಂದೂಡಿಕೆ

Avinash R

ವಿಜಯವಾಣಿ ಸುದ್ದಿಜಾಲ ಗುರುಪುರ

ಉಳಾಯಿಬೆಟ್ಟು- ಪರಾರಿಯಲ್ಲಿ ನ.13ರಂದು ನಡೆಯಲಿದ್ದ ರಾಷ್ಟ್ರೀಯ ಹೆದ್ದಾರಿ ತಡೆ(ವಾಹನ ತಡೆ) ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮಂಗಳೂರು ತಾಲೂಕು ಪಂಚಾಯಿತಿಯಲ್ಲಿ ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷರ ನಿಯೋಗದೊಂದಿಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸೋಮವಾರ ನಡೆಸಿದ ಸಕಾರಾತ್ಮಕ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು, ಅಡ್ಯಾರು, ಬೆಂಜನಪದವು, ಬಿ.ಸಿ.ರೋಡಿಗೆ ಸಂಪರ್ಕ ಕಲ್ಪಿಸುವ ಪಿಡಬ್ಲುೃಡಿ ರಸ್ತೆಯ ಉಳಾಯಿಬೆಟ್ಟು ಮೇಲ್ಮನೆಯಲ್ಲಿರುವ ಕಿರುಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಭಾರಿ ವಾಹನ ನಿಷೇಧಿಸಿ ಕಮಾನು ಅಳವಡಿಸಲಾಗಿದೆ. ಫಲ್ಗುಣಿ ನದಿಯ ಕಿರುತೋಡಿಗೆ ನಿರ್ಮಿಸಲಾದ ಸೇತುವೆ ಇದಾಗಿದ್ದು, ಇಲ್ಲಿ ತಾತ್ಕಾಲಿಕ ಮಣ್ಣು ರಸ್ತೆ ನಿರ್ಮಿಸಲು ಅವಕಾಶವಿದೆ. ಇದಕ್ಕೆ ಸ್ಥಳೀಯ ಜಾಗದ ಮಾಲೀಕರು ಒಪ್ಪಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಸೇತುವೆ ನಿಷೇಧದ ಬಳಿಕ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವಯೋವೃದ್ಧರು, ಮಹಿಳೆಯರು ಹಾಗೂ ಈ ಭಾಗದ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಪ್ರಯಾಣಿಕರು ಕಂಗಾಲಾಗಿದ್ದಾರೆ. ಜನರು ಸುತ್ತಿ ಬಳಸಿ ಪ್ರಯಾಣಿಸುವಂತಾಗಿದೆ.

ತಕ್ಷಣ ಪರಿಶೀಲನೆ

ಇನ್ನೆರಡು ದಿನದಲ್ಲಿ ಪಿಡಬ್ಲುೃಡಿ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳ ತಂಡ ಉಳಾಯಿಬೆಟ್ಟಿಗೆ ಭೇಟಿ ನೀಡಿ, ಹೊಸ ಕಿರುಸೇತುವೆ ನಿರ್ಮಾಣದವರೆಗೆ(ಮುಂದಿನ ಮಳೆಗಾಲದವರೆಗೆ) ಸೇತುವೆ ಬಳಿ ಇರುವ ತೋಡಿಗೆ ತಾತ್ಕಾಲಿಕ ಮಣ್ಣು ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲಿಸಿ, ಕಾಮಗಾರಿಯ ಅಂದಾಜು ವೆಚ್ಚ ವರದಿ ತಯಾರಿಸಲಾಗುವುದು. ಆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಹರ್ಷವರ್ಧನ ಭರವಸೆ ನೀಡಿದ್ದಾರೆ.

ಸಹಾಯಕ ಆಯುಕ್ತರು, ತಹಸೀಲ್ದಾರ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಪೊಲೀಸ್ ಅಧಿಕಾರಿಗಳು, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಸದಸ್ಯ ವಿಶ್ವನಾಥ ಶೆಟ್ಟಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಶೀಘ್ರ ಪರಿಹಾರ ಭರವಸೆ

ನ.9ರಂದು ಸುದ್ದಿಗೋಷ್ಠಿ ನಡೆಸಿದ್ದ ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷರ ನೇತೃತ್ವದ ಸ್ಥಳೀಯ ಪ್ರಮುಖರ ತಂಡ ನ.13ರಂದು ಉಳಾಯಿಬೆಟ್ಟು ಕಿರುಸೇತುವೆಗೆ ರಾಷ್ಟ್ರೀಯ ಹೆದ್ದಾರಿ 169ರಿಂದ ಸಂಪರ್ಕ ಕಲ್ಪಿಸುವ ಪರಾರಿಯಲ್ಲಿ ವಾಹನ ತಡೆದು ಜಿಲ್ಲಾಡಳಿತದ ಗಮನ ಸೆಳೆಯಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಹರ್ಷವರ್ಧನ ಹಾಗೂ ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ನೇತೃತ್ವದ ಅಧಿಕಾರಿಗಳು ಸೋಮವಾರ ಮಂಗಳೂರಿನಲ್ಲಿ ಉಳಾಯಿಬೆಟ್ಟಿನ ಜನಪ್ರತಿನಿಧಿಗಳು ಹಾಗೂ ಪ್ರಮುಖರೊಂದಿಗೆ ಅಧಿಕೃತ ಮಾತುಕತೆ ನಡೆಸಿ, ಶೀಘ್ರ ಪರಿಹಾರ ಕಾರ್ಯದ ಬಗ್ಗೆ ಭರವಸೆ ನೀಡಿದ್ದಾರೆ.

ನ.15ರೊಳಗೆ ಜಿಲ್ಲಾಡಳಿತ ಭರವಸೆಗೆ ತಕ್ಕಂತೆ ನಡೆದುಕೊಳ್ಳದಿದ್ದಲ್ಲಿ ಉಳಾಯಿಬೆಟ್ಟು- ಪೆರ್ಮಂಕಿ ಭಾಗದ ಸಾರ್ವಜನಿಕರು ನ.16ರಂದು ಪರಾರಿಯಲ್ಲಿ ಹೆದ್ದಾರಿ ವಾಹನ ತಡೆದು ಪ್ರತಿಭಟನೆ ನಡೆಸಲಿದ್ದಾರೆ. - ಹರಿಕೇಶ್ ಶೆಟ್ಟಿ ನಡಿಗುತ್ತು, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ https://www.vijayavani.net/priyadarshini-society-customer-day-celebration https://www.vijayavani.net/contribute-to-living-a-natural-life