ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಉದ್ಘಾಟನೆ

ವಿವೇಕಾನಂದ ದಾಸನಕೊಪ್ಪ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (48) ನಿರ್ವಿುಸಿದ ಮೇಲ್ಸೇತುವೆಯನ್ನು ಉದ್ಘಾಟಿಸುವ ಜತೆಗೆ ವಾಹನ ಓಡಾಟಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಹಸಿರು ಬಾವುಟ ತೋರಿಸುವ ಮೂಲಕ ಶನಿವಾರ ಚಾಲನೆ ನೀಡಿದರು.

ಸರ್ವಿಸ್ ರಸ್ತೆ ಪೂರ್ಣಗೊಳಿಸಲು ಆಗ್ರಹ: ಮೇಲ್ಭಾಗದ ರಸ್ತೆ ಕಾಮಗಾರಿ ಸಲುವಾಗಿ ಹೆದ್ದಾರಿ ಎರಡು ಕಡೆಯ ಸರ್ವೀಸ್ ರಸ್ತೆಗಳಲ್ಲಿ ಬೃಹತ್ ವಾಹನಗಳು ಓಡಾಡಿದ್ದರಿಂದ ಹಾಳಾಗಿವೆ. ಈ ರಸ್ತೆಗಳಲ್ಲಿ ಗ್ರಾಮಸ್ಥರು, ಹೊಲಕ್ಕೆ ತೆರಳುವ ವಾಹನಗಳು ಓಡಾಡಲು ಕೂಡಲೇ ರಸ್ತೆ ದುರಸ್ತಿಗೊಳಿಸಿ ಅನುಕೂಲ ಕಲ್ಪಿಸಬೇಕು. ಮೋಟೆಬೆನ್ನೂರ ಬಸ್ ನಿಲ್ದಾಣ ಹಾಗೂ ದ್ವಾರ ಪ್ರವೇಶದ ಬಳಿ ವಾಹನಗಳು ಬಂದು-ಹೋಗುವ ರಸ್ತೆಯಲ್ಲಿ ಅಪಘಾತ ಜರುಗುವ ಸಾಧ್ಯತೆಯಿದ್ದು, ದೊಡ್ಡ ಪ್ರಮಾಣದಲ್ಲಿ ರೇಡಿಯಂ ಅಂಟಿಸಿ, ಸೂಚನಾ ಫಲಕ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಎರಡೆರಡು ಬಾರಿ ಉದ್ಘಾಟನೆ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡಿತ್ತು. ಆದರೂ, ಬಳಕೆಗೆ ಅವಕಾಶ ಇರಲಿಲ್ಲ. ಜು. 21ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮೇಲ್ಸೇತುವೆ ಎಡಭಾಗದ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ್ದರು. ಈಗ ಸಂಸದ ಬಸವರಾಜ ಬೊಮ್ಮಾಯಿ ಮೇಲ್ಸೇತುವೆ ಬಲಭಾಗದ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಹಸಿರು ನಿಶಾನೆ ತೋರಿಸಿದರು. ಎರಡು ರಸ್ತೆಗಳಲ್ಲಿ ವಾಹನಗಳು ನಿರಾಳವಾಗಿ ಓಡಾಡುತ್ತಿವೆ. ಆದರೆ, ಒಂದು ರಸ್ತೆಯನ್ನು ಕಾಂಗ್ರೆಸ್ ಜನಪ್ರತಿನಿಧಿಗಳು, ಮತ್ತೊಂದು ರಸ್ತೆಯನ್ನು ಬಿಜೆಪಿ ಜನಪ್ರತಿನಿಧಿಗಳು ಉದ್ಘಾಟಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎರಡು ಕಾರ್ಯಕ್ರಮಲ್ಲಿ ಜಿಲ್ಲಾಡಳಿತ ಪಾಲ್ಗೊಂಡಿದೆ.

ರೈಲ್ವೆ ಹಳಿ ಗೇಟ್ ವೀಕ್ಷಣೆ: ಹೆದ್ದಾರಿ ಲೋಕಾರ್ಪಣೆ ಕಾರ್ಯಕ್ರಮ ಮುಗಿಸಿ ತೆರಳುವಾಗ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರು ಖುರ್ಧಕೋಡಿಹಳ್ಳಿಯಿಂದ ಮೋಟೆಬೆನ್ನೂರ ಗ್ರಾಮಕ್ಕೆ ದಾಟುವ ರೈಲ್ವೆ ಗೇಟ್ ವೀಕ್ಷಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬಳಿಕ ಹಳಿ ಪಕ್ಕದ ರೈಲು ನಿಲ್ದಾಣಕ್ಕೆ ತೆರಳುವ ಹೊಲದ ದಾರಿ ಡಾಂಬರೀಕರಣ, ಹಳಿ ದಾಟುವ ಜಾಗದಲ್ಲಿ ಸುರಕ್ಷತೆ ಕ್ರಮ ಅಳವಡಿಕೆ ಸೇರಿದಂತೆ ವಿವಿಧ ಸಮಸ್ಯೆ ಆಲಿಸಿ, ಸಂಬಂಧಿಸಿದ ಇಂಜಿನಿಯರ್ ಜತೆಗೆ ರ್ಚಚಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಅಧ್ಯಕ್ಷ ಅರುಣಕುಮಾರ ಪೂಜಾರ, ಪದಾಕಾರಿಗಳಾದ ಭಾರತಿ ಜಂಬಗಿ, ಶಿವಬಸಪ್ಪ ಕುಳೇನೂರ,ನಾಗರಾಜ ಹಾವನೂರು, ವಿಜಯ ಬಳ್ಳಾರಿ, ನಿಂಗಪ್ಪ ಬಟ್ಟಲಕಟ್ಟೆ, ಪುರಸಭೆ ಸದಸ್ಯರಾದ ಚಂದ್ರಪ್ಪ ಶೆಟ್ಟರ, ಸರೋಜಾ ಉಳ್ಳಾಗಡ್ಡಿ, ಫಕೀರವ್ವ ಚಲವಾದಿ, ಮಲ್ಲಿಕಾರ್ಜುನ ಬಳ್ಳಾರಿ ಇತರರಿದ್ದರು.