ಮೈಸೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಗರದ ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ‘ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ’ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಪಂಚಮಶೀಲ ಸಂಸ್ಥೆ ಅಧ್ಯಕ್ಷೆ ಡಾ.ರಚನಾ ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ನಿರ್ಲಕ್ಷೃ ತೋರುವುದು ಸರಿಯಲ್ಲ. ಹೆಣ್ಣು ಮಕ್ಕಳು ಶಿಕ್ಷಣ ಪೂರ್ಣಗೊಳಿಸಿದ ನಂತರವಷ್ಟೇ ಅವರ ವಿವಾಹ ಹಮ್ಮಿಕೊಳ್ಳಬೇಕು. ಒಂದುವೇಳೆ ವಿದ್ಯಾಭ್ಯಾಸ ಪೂರ್ಣಗೊಳ್ಳುವ ಮೊದಲೇ ಪಾಲಕರು ವಿವಾಹಕ್ಕೆ ಮುಂದಾರೆ ಅಥವಾ ಬಾಲ್ಯವಿವಾಹಕ್ಕೆ ಮುಂದಾದರೆ ಪಾಲಕರಿಗೆ ತಿಳಿ ಹೇಳುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಕಡಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮ ಬಳಿ ಕೋಟ್ಯಾಂತರ ರೂ. ಹಣ ಇದ್ದರೂ ಉತ್ತಮ ಆರೋಗ್ಯ ಇಲ್ಲದೆ ಹೋದರೆ ಏನನ್ನೂ ಅನುಭವಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯಯುತ ಜೀವನ ಶೈಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಮಕ್ಕಳ ಶಿಕ್ಷಣಾಧಿಕಾರಿ ಯೋಗೇಶ್, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಪಿ.ವಿಶ್ವನಾಥ್ ಜಿಲ್ಲಾ ಆಯುಕ್ತೆ ಪುಷ್ಪವಲ್ಲಿ, ಕಾರ್ಯದರ್ಶಿ ಸುರೇಶ್, ಚಂದ್ರು, ರಾಮಪ್ರಸಾದ್ ಹಾಗೂ ಇತರರು ಇದ್ದರು.