ಮಂಗಳೂರು: ಸ್ವಾತಂತ್ರೃದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆ.11ರಿಂದ 17ರವರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮ ಆಯೋಜಿಸಿದೆ. ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ರಾಷ್ಟ್ರಧ್ವಜ ಹೊಲಿದು ಸಿದ್ಧಪಡಿಸಿ ನೀಡುವಂತೆ ಜಿಲ್ಲೆಯ ಸಂಜೀವಿನಿ ಗ್ರಾಮ ಪಂಚಾಯಿತಿ ಮತ್ತು ಅದರ ಒಕ್ಕೂಟಗಳಿಗೆ ಆದೇಶ ನೀಡಿದೆ.
ಈ ನಿಟ್ಟಿನಲ್ಲಿ ಉಜಿರೆಯ ರುಡ್‌ಸೆಟ್‌ನಲ್ಲಿ ಶುಕ್ರವಾರ ಮಹಿಳಾ ಸ್ವ ಸಹಾಯ ಸಂಘದ 62 ಸದಸ್ಯರಿಗೆ ಧ್ವಜ ಸಂಹಿತೆ ತಿಳಿಸಿ, ರಾಷ್ಟ್ರ ಧ್ವಜವನ್ನು ಹೊಲಿಯುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಧ್ವಜವನ್ನು ಹೊಲಿದ ನಂತರ ಸ್ಕ್ರೀನ್‌ಪ್ರಿಂಟ್ ಮೂಲಕ ಅಶೋಕ ಚಕ್ರವನ್ನು ಮುದ್ರಿಸಲಾಗುವುದು. ಇಲ್ಲಿ ತರಬೇತಿ ಪಡೆದ ಮಹಿಳೆಯರು, ವಿವಿಧ ಗ್ರಾಪಂ ಹಾಗೂ ಮನೆಗಳಲ್ಲಿ ಧ್ವಜಗಳನ್ನು ಹೊಲಿದು, ಸಿದ್ಧಪಡಿಸಿ ಸಂಜೀವಿನಿ ಒಕ್ಕೂಟಗಳ ಮೂಲಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ತಲುಪಿಸಲಿದ್ದಾರೆ.
ಸುಳ್ಯ ತಾಲೂಕಿನ ಆರಂತೋಡು ಗ್ರಾಮ ಪಂಚಾಯಿಯಲ್ಲಿ 1,500 ಧ್ವಜ ಸಿದ್ಧಪಡಿಸಲು ಆದೇಶ ನೀಡಲಾಗಿದೆ. ಸುಳ್ಯದ ಜಾಲ್ಸೂರು ಗ್ರಾಪಂ ಹಾಗೂ ಬಂಟ್ವಾಳ ತಾಲೂಕಿನ ರಾಯಿ ಗ್ರಾಪಂನಲ್ಲಿ ಧ್ವಜ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.ಈಗ ಸಿದ್ಧಪಡಿಸುತ್ತಿರುವ ಹತ್ತಿ ಬಟ್ಟೆಯ ಧ್ವಜಕ್ಕೆ 60 ರೂ. ಹಾಗೂ ಪಾಲಿಸ್ಟರ್ ಧ್ವಜಕ್ಕೆ 35 ರೂ. ದರ ವಿಧಿಸಲಾಗಿದೆ ಎಂದು ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ತಿಳಿಸಿದ್ದಾರೆ. ರುಡ್‌ಸೆಟ್ ನಿರ್ದೇಶಕರಾದ ಸುರೇಶ್ ಕೆ.ಎಂ., ವಲಯ ಮೇಲ್ವಿಚಾರಕ ಜಯಾನಂದ ಹಾಗೂ ಸಂಪನ್ಮೂಲ ವ್ಯಕ್ತಿ ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.