ಶಿವಮೊಗ್ಗ: ರಾಷ್ಟ್ರಧ್ವಜದ ಬಣ್ಣದ ಬಗ್ಗೆ ತಿಳಿಸಲು ಕಾಂಗ್ರೆಸ್ ನಾಯಕರಿಗೆ ಒಂದು ಅಭ್ಯಾಸ ವರ್ಗ ಮಾಡುವ ಅವಶ್ಯಕತೆ ಇದೆ ಎಂದು ಕೆ.ಎಸ್.ಈಶ್ವರಪ್ಪ ಗೇಲಿ ಮಾಡಿದ್ದಾರೆ.
ತಿರಂಗಾ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ತಿರಸ್ಕಾರ ಮತ್ತು ಅಜ್ಞಾನ ಇದ್ದು ತ್ರಿವರ್ಣ ಧ್ವಜ, ರಾಷ್ಟ್ರಭಕ್ತಿ ಬಗ್ಗೆ ಈಗಿನ ಕಾಂಗ್ರೆಸ್‌ನವರಿಗೆ ಕಲ್ಪನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಇಡೀ ದೇಶದ ಜನ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ತಿರಂಗಾ ಹಾರಿಸುವುದನ್ನು ಜನರು ಸಂತೋಷದಿಂದ ಸ್ವಾಗತ ಮಾಡಿದ್ದಾರೆ. ನಮ್ಮ ದೇಶದ ಜನ ರಾಷ್ಟ್ರಭಕ್ತಿಯ ಕಡೆಗೆ ಜಾಗೃತಿ ಆಗುತ್ತಿದ್ದಾರೆ. ಆದರೆ ಸಿಎಂ ಆಗಿದ್ದವರಿಗೆ ನಮ್ಮ ರಾಷ್ಟ್ರಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು, ಬಿಳಿ ಹಸಿರು ಎಂದು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗಿದೆ. ಮೊದಲು ನಮ್ಮ ರಾಷ್ಟಧ್ವಜದ ಬಣ್ಣದ ಬಗ್ಗೆ ತಿಳಿದುಕೊಳ್ಳಬೇಕು. ಜತೆಗೆ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ರಾಷ್ಟ್ರ, ರಾಷ್ಟ್ರಧ್ವಜ, ರಾಷ್ಟ್ರಭಕ್ತಿಯನ್ನು ಪ್ರಶ್ನೆ ಮಾಡುವ ಅಧಿಕಾರ ಇಲ್ಲ. ಕಾಂಗ್ರೆಸ್‌ನಿಂದ ರಾಷ್ಟ್ರಭಕ್ತಿ ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದ ಅವರು, ದೇಶವನ್ನು ತುಂಡು ಮಾಡಿದವರು ನೆಹರು. ನೆಹರು ವಂಶಸ್ಥ, ಎಐಸಿಸಿ ನಾಯಕ ರಾಹುಲ್ಗಾಂಧಿ ಭಾರತ್ ಜೋಡೋ ವಿಚಾರ ಇಟ್ಕೊಂಡು ಪಾದಯಾತ್ರೆ ಮಾಡುತ್ತೇವೆ ಅಂತಿದ್ದಾರೆ. ದೇಶ ವಿಭಜನೆ ಮಾಡಿದವರ ಸಂತತಿ ಭಾರತ್ ಜೋಡೋ ಅಂತಾ ಹೊರಟಿರುವುದು ದುಃಖಕರ ಸಂಗತಿ. ನೆಹರು ಸಂತತಿ ಅಂದರೆ ಜಿನ್ನಾ ಸಂತತಿ ಇದ್ದಂತೆ ಎಂದು ವಾಗ್ದಾಳಿ ನಡೆಸಿದರು.