ಯಲಬುರ್ಗಾದಲ್ಲಿ ವಿಹಿಂಪ, ಬಜರಂಗದಳದಿಂದ ಗ್ರೇಡ್-2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಶನಿವಾರ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ರಾಷ್ಟ್ರಧ್ವಜಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

ಶಶಿಧರ ಎಲ್

ಯಲಬುರ್ಗಾ: ಪಟ್ಟಣದ ಒಂಬತ್ತನೇ ವಾರ್ಡ್ (ಬೀಬಿಫಾತಿಮಾ) ಆಲಂ ದರ್ಗಾದ ಮೇಲೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಶನಿವಾರ ಪ್ರತಿಭಟನೆ ನಡೆಯಿತು.

ವಿಹಿಂಪ, ಭಜರಂಗದಳದ ತಾಲೂಕು ಕಾರ್ಯದರ್ಶಿ ರಾಜಶೇಖರ ದ್ಯಾಂಪುರ ಮಾತನಾಡಿ, ದರ್ಗಾದ ಮೇಲೆ ರಾಷ್ಟ್ರಧ್ವಜ ಹೋಲುವ ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರ ತೆಗೆದು, ಅಲ್ಲಿ ಉರ್ದು ಭಾಷೆಯಲ್ಲಿ ಬರೆದು ಧ್ವಜಾರೋಹಣ ಮಾಡಲಾಗಿದೆ. ಜತೆಗೆ ಟಿಪ್ಪುವಿನ ಖಡ್ಗದ ಚಿತ್ರ ಬಿಡಿಸಲಾಗಿದೆ. ಇಂಥ ಮನಸ್ಥಿತಿಯುಳ್ಳ ದುಷ್ಕರ್ಮಿಗಳನ್ನು ಮಟ್ಟಹಾಕಬೇಕು.

ಶಾಂತಿ, ಸೌಹಾರ್ದದಿಂದ ಕೂಡಿದ ಪಟ್ಟಣದಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾಗುವ ಮತ್ತು ಇದಕ್ಕೆ ಸಹಕರಿಸಿದವರ ವಿರುದ್ಧ ಕ್ರಮವಾಗಬೇಕು. ದರ್ಗಾ ಕಮಿಟಿಗೆ ಸಂಬಂಧಿಸಿದ ಅಧ್ಯಕ್ಷ ಹಾಗೂ ಸದಸ್ಯರನ್ನು ತನಿಖೆಗೆ ಒಳಪಡಿಸಬೇಕು. ಧ್ವಜ ತಯಾರಿ, ಧ್ವಜದಲ್ಲಿ ಅಕ್ಷರ ಬರೆದಿರುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹಿಂದು ಜಾಗರಣ ವೇದಿಕೆ ಕುಕನೂರು ತಾಲೂಕು ಅಧ್ಯಕ್ಷ ವಿನಾಯಕ ಸರಗಣಾಚಾರ, ಜಿಲ್ಲಾ ಪ್ರಮುಖ ಬಸವರಾಜ ಉಮಚಗಿ, ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಯುವಮೋರ್ಚಾ ತಾಲೂಕು ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿದ್ದು ಮಣ್ಣಿನವರ್, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ದಾನನಗೌಡ ತೊಂಡಿಹಾಳ, ಪ್ರಭುರಾಜ ಕಲಬುರಗಿ, ಅಮರೇಶ ಹುಬ್ಬಳ್ಳಿ, ಬಾಪುಗೌಡ ಪಾಟೀಲ್, ವಸಂತ ಭಾವಿಮನಿ, ಶಿವಾನಂದ ಬಣಕಾರ, ವಿಜಯ ಜಕ್ಕಲಿ, ಕಳಕಪ್ಪ ತಳವಾರ, ಹನಮಂತ ರಾಠೋಡ ಇತರರಿದ್ದರು.