ಜಿಲ್ಲೆ

23ರಂದು ರಾಷ್ಟ್ರೀಯ ರೈತರ ಮಹಾ ಅಧಿವೇಶನ: ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಮಾಹಿತಿ

ಮೈಸೂರು: ವಿಶ್ವ ರೈತ ದಿನದ ಅಂಗವಾಗಿ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ರೈತರ ಮಹಾ ಅಧಿವೇಶನ ನಡೆಸುವ ಮೂಲಕ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ, ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡರ ಸಮ್ಮುಖದಲ್ಲಿ ಸಾಲ ಮನ್ನಾಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉದ್ಯಮಿಗಳಿಗೆ ಸಂಕಷ್ಟ ಆಗಿದೆ ಎಂದು ಕೇಂದ್ರ ಸರ್ಕಾರ 12 ಲಕ್ಷ ಕೋಟಿ ರೂ. ಮನ್ನಾ ಮಾಡಿದೆ. ಅದೇ ರೀತಿ ರೈತರ ಸಾಲ ಮನ್ನಾವಾಗಬೇಕು. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ, ಬೆಳೆ ನಾಶವಾಗಿದೆ, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದ್ದರಿಂದ ಆತನ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ 2953ರೂ ಪಾವತಿ ಮಾಡಿದ್ದೇವೆ ಎಂದು ಸುಳ್ಳು ವರದಿ ನೀಡಿ ಕಬ್ಬು ಬೆಳೆಗಾರರನ್ನು ವಂಚಿಸುತ್ತಿದೆ. ಸಕ್ಕರೆ ಬೆಲೆ ಗಗನಕ್ಕೆ ಏರುತ್ತಿದೆ. ಮೂರು ನಾಲ್ಕು ಸಭೆಗಳಾದರೂ ಕಾರ್ಖಾನೆಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂತಿಮ ಎಚ್ಚರಿಕೆ ನೀಡುತ್ತಿದ್ದೇವೆ, ಎಚ್ಚೆತ್ತುಕೊಳ್ಳದಿದ್ದರೆ ಕಾರ್ಖಾನೆ ಮಾಲೀಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಕೃಷಿ ಪಂಪ್ ಸೆಟ್ ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರದ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿಮಹದೇವಸ್ವಾಮಿ ಕಮಲಮ್ಮ, ಪಟೇಲ್ ಶಿವಮೂರ್ತಿ, ಕುರುಬೂರು ಸಿದ್ದೇಶ್, ಹಂಪಾಪುರ ರಾಜೇಶ, ಕಬಿನಿ ಮಾದಪ್ಪ, ವೆಂಕಟೇಶ್ ಇತರರು ಇದ್ದರು.