ಮಂಡ್ಯ: ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಕೊಡುಗೆ ಅಪಾರ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕೃಷಿಕ ಅಲಯನ್ಸ್ ಸಂಸ್ಥೆ ಮತ್ತು ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅಭಿಯಂತರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶ ಮತ್ತು ವಿಶ್ವಕ್ಕೆ ಅಪಾರ ಕೊಡುಗೆಯನ್ನು ನೀಡಿದವರಲ್ಲಿ ಪ್ರಮುಖರಾದ ಕರ್ನಾಟಕದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನೇ ರಾಷ್ಟ್ರೀಯ ಅಭಿಯಂತರರ ದಿನವಾಗಿ ಕೇಂದ್ರ ಸರ್ಕಾರ ಘೋಷಿಸಿತು. 1968ರಿಂದ ಆರಂಭಗೊಂಡು ಇಂದಿನವರೆಗೂ ಇಂಜಿನಿಯರ್ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ವಿಶ್ವೇಶ್ವರಯ ಕೊಡುಗೆ ಭಾರತದಲ್ಲಿ ಮಾತ್ರವಲ್ಲದೆ, ಶ್ರೀಲಂಕಾ ಮತ್ತು ತಾಂಜೇನಿಯದಲ್ಲಿ ಕೂಡ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. 1912ರಿಂದ ಮೈಸೂರಿನ ಅರಸು ನಾಲ್ವಡಿ ಅವರ ಆಡಳಿತಾವಧಿಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದರು. ಕೆಆರ್‌ಎಸ್ ನಿರ್ಮಾಣದಲ್ಲಿ ಸರ್‌ಎಂವಿ ಸೇವೆ ಅನನ್ಯ. ಜಲಾಶಯಗಳಿಗೆ ಪ್ರವಾಹ ದ್ವಾರಗಳನ್ನು ಸ್ವಯಂಚಾಲಿತವಾಗಿ ತೆರೆಯುವ ವಿಶ್ವದ ಮೊದಲ ವ್ಯವಸ್ಥೆಯನ್ನು ಅವರು ಕಂಡುಹಿಡಿದರು ಎಂದು ಹೇಳಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ವಲಯಾಧ್ಯಕ್ಷ ಪ್ರೊ.ಬಿ.ಎಸ್.ಶಿವಕುಮಾರ್, ಶಿಕ್ಷಕ ಶಶಿಧರ ಈಚೆಗೆರೆ, ಜಗದೀಶ್, ಕೆ.ಎಂ.ಕುಮಾರ್, ಪ್ರೊ.ಡೇವಿಡ್, ಎನ್.ಕೃಷ್ಣಪ್ಪ, ಎಂ.ಲೋಕೇಶ್, ಎಸ್.ರಮೇಶ್, ಇಂಜಿನಿಯರ್‌ಗಳಾದ ಕಾಳೇಗೌಡ, ಕೆಂಪರಾಜು, ಉಮಾ ಶಂಕರ್, ನಾಗರಾಜು, ಪುರುಷೋತ್ತಮ್, ಕೀಲಾರ ಕೃಷ್ಣೇಗೌಡ ಇತರರಿದ್ದರು. ಇದೇ ಸಂದರ್ಭದಲ್ಲಿ ಇಂಜಿನಿಯರ್‌ಗಳಾದ ಚಂದ್ರಶೇಖರ್, ಎಚ್.ಎಚ್.ಕುಮಾರ್, ಡಿ.ಶಿವರಾಜು, ಎಚ್.ಜೆ.ಸುರೇಶ್ ಅವರನ್ನು ಅಭಿನಂದಿಸಲಾಯಿತು.