ಜಿಲ್ಲೆ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯಪಡೆ ರಚನೆ; ಉನ್ನತ ಶಿಕ್ಷಣ ಸಚಿವ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ಕಾರ್ಯಪಡೆ ರಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಭಾಟಿಸಿ ಮಾತನಾಡಿದರು.

ಗುಣಮಟ್ಟದ ಶಿಕ್ಷಣ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ ಅವಶ್ಯ ಎಂದು ಅವರು ಪ್ರತಿಪಾದಿಸಿದರು. ಕುಲಪತಿಗಳು ಶಿಕ್ಷಣದ ಗುಣಮಟ್ಟ ಕಾಪಾಡುವತ್ತ ಗಮನ ನೀಡಬೇಕು. ಕನಿಷ್ಠ ಮಾನದಂಡ ಮತ್ತು ಮೂಲಸೌಕರ್ಯ ಇಲ್ಲದ ಕಾಲೇಜು ಹಾಗೂ ಕೋರ್ಸ್ ಆರಂಭಿಸಲು ಶಿಫಾರಸು ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಅಧಿಕಾರ ದುರ್ಬಳಕೆ ಬೇಡ: ಸಿಂಡಿಕೇಟ್ ಸದಸ್ಯರು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು. ಶಿಕ್ಷಣದ ಗುಣಮಟ್ಟ ಸುಧಾರಿಸಿ ವ್ಯವಸ್ಥೆ ಬಲಪಡಿಸುವ ಕಡೆಗೆ ಗಮನ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು. ಸಿಂಡಿಕೇಟ್ ಸದಸ್ಯರು ಮುಲಾಜಿಗೆ ಒಳಗಾಗಿ ಕಾಲೇಜುಗಳ ಸಂಯೋಜನೆಗೆ ಶಿಫಾರಸು ಮಾಡಬಾರದು. ನಿಮಗೆ ನೀಡಿರುವ ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದರು.

ದೂರಶಿಕ್ಷಣಕ್ಕೆ ಒಂದೇ ವಿವಿ: ಕರ್ನಾಟಕ ಮುಕ್ತ ವಿವಿ ಯಿಂದ ಮಾತ್ರ ದೂರ ಶಿಕ್ಷಣ ನೀಡುವ ಕುರಿತು ಚಿಂತನೆ ನಡೆಸಿರುವುದಾಗಿ ಅಶ್ವತ್ಥನಾರಾಯಣ ತಿಳಿಸಿದರು.

ಮಾರ್ಗದರ್ಶನಕ್ಕೆ ಕೌನ್ಸೆಲರ್

ಕಾಲೇಜುಗಳಲ್ಲಿ ಮಾತ್ರವಲ್ಲ, ಹೈಸ್ಕೂಲ್ ಮಟ್ಟದಲ್ಲಿ ಯಾವ ಕೋರ್ಸ್ ವ್ಯಾಸಂಗ ಮಾಡಿದರೆ ಉದ್ಯೋಗ ಗಳಿಸಲು ಸಾಧ್ಯ ಎಂಬ ಮಾಹಿತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅದಕ್ಕಾಗಿ ಪ್ರತಿ ಹೈಸ್ಕೂಲ್ ಮತ್ತು ತಾಲೂಕು ಮಟ್ಟದಲ್ಲಿ ಕೌನ್ಸೆಲರ್ ನೇಮಕ ಮಾಡಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು. ಕೌನ್ಸಲರ್​ಗಳು ವಿದ್ಯಾರ್ಥಿಗಳಿಗೆ ಯಾವ್ಯಾವ ಕೋರ್ಸ್​ನಿಂದ ಏನೆಲ್ಲ ಅನುಕೂಲಗಳಿವೆ? ವ್ಯಾಸಂಗ ಮುಗಿದ ಬಳಿಕ ಕೌಶಲ ತರಬೇತಿ, ಬಡಮಕ್ಕಳಿಗೆ ಶಿಕ್ಷಣ ಪೂರ್ಣಗೊಳಿಸಲು ಕಷ್ಟವಿದ್ದರೆ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.