ಜಿಲ್ಲೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಕಾರ್ಯಪಡೆ ವರದಿ ಸಲ್ಲಿಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವ ಸಂಬಂಧ ರಚನೆಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದ ಕಾರ್ಯಪಡೆಯು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಧಾನಸೌಧದಲ್ಲಿ ಈ ವರದಿ ಸ್ವೀಕರಿಸಿದರು.

ಅಶ್ವತ್ಥ ನಾರಾಯಣ ಮಾತನಾಡಿ, ಕರ್ನಾಟಕ ಶಿಕ್ಷಣ ಆಯೋಗ ಸ್ಥಾಪಿಸಬೇಕು, ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಇವೆರಡೂ ಈ ಆಯೋಗದಡಿ ಕೆಲಸ ಮಾಡಬೇಕು. ಈ ಆಯೋಗಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ವರ್ಷಕ್ಕೆ ಕನಿಷ್ಠ 2 ಸಲ ಸಭೆಗಳನ್ನು ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಬೇಕು, ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಇದರ ಉಪಾಧ್ಯಕ್ಷರಾಗಿರಬೇಕು ಎಂಬುದು ಸೇರಿ ಹಲವು ಪ್ರಮುಖ ಕ್ರಮಕೈಗೊಳ್ಳುವ ಕುರಿತು ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಇದ್ದರು.

ಧನಸಹಾಯಕ್ಕೆ ಕಾರ್ಯಪಡೆ

ಕರ್ನಾಟಕ ಶಾಲಾ ಶಿಕ್ಷಣ ಮಂಡಲಿ ಶಾಲಾ ಶಿಕ್ಷಣ ಹಾಗೂ ಸರ್ಕಾರದೊಂದಿಗೆ ಸಂಬಂಧವುಳ್ಳ ವಿವಿಧ ಇಲಾಖೆಗಳು ಹಾಗೂ ಅಂಗಸಂಸ್ಥೆಗಳ ನಡುವೆ ಸಮನ್ವಯ, ಸಂಪರ್ಕದೊಂದಿಗೆ ಕಾರ್ಯನಿರ್ವಹಿಸಬೇಕು. ಶಾಲಾ ಶಿಕ್ಷಣಕ್ಕೆ ಸಾರ್ವಜನಿಕ ಧನಸಹಾಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಹೇಗೆ ಎಂಬ ಪ್ರಯತ್ನದಲ್ಲಿ ಒಂದು ಕಾರ್ಯಪಡೆಯನ್ನು ಸ್ಥಾಪಿಸಬೇಕು.

ವರದಿಯಲ್ಲಿರುವ ಪ್ರಮುಖ ಸಲಹೆಗಳು

  •  ನಿರ್ಧಿಷ್ಟ ಗುರಿಗಳೊಂದಿಗೆ ಅನುಷ್ಠಾನ ಮಿಷನ್ ಸ್ಥಾಪಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅನುಷ್ಠಾನ ಪ್ರಗತಿ ಕುರಿತು ಸಾರ್ವಜನಿಕ ಅವಲೋಕನ ನಡೆಸಬೇಕು. ಇದಕ್ಕಾಗಿ ಅನುಷ್ಠಾನ ಕಾರ್ಯಪಡೆ ರಚಿಸಬೇಕು.
  • ಎಸ್​ಎಸ್​ಕೆ (ಸಮಗ್ರ ಶಿಕ್ಷಣ) ಮತ್ತು ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ತಕ್ಷಣವೇ ಅನುಷ್ಠಾನ ನಿಧಿಗೆ ಅನುವು ಮಾಡಿಕೊಡಬೇಕು.
  • ರಾಜ್ಯ ಶಾಲಾ ಪ್ರಮಾಣೀಕರಣ ಪ್ರಾಧಿಕಾರ ಮತ್ತು ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ ಸ್ಥಾಪಿಸಬೇಕು.
  • ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿರುವ ಉನ್ನತ ಶಿಕ್ಷಣ ಸಂರಚನೆಯನ್ನು ಕಾರ್ಯರೂಪಕ್ಕಿಳಿಸಲು ಹೊಸ ವಿಶ್ವವಿದ್ಯಾಲಯ ಕಾಯ್ದೆ ರೂಪಿಸಬೇಕು.
  • ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಇರುವ ಸಂಸ್ಥೆಗಳ ನಡುವೆ ಪ್ರತ್ಯೇಕ ಅಧಿಕಾರ ವ್ಯಾಪ್ತಿಯನ್ನು ನಿಗದಿಗೊಳಿಸಬೇಕು.
  • ಕೆಪಿಎಸ್/ ಶಾಲಾ ಸಮುಚ್ಚಯಗಳಲ್ಲಿ ಸೇವಾ ನಿಯಮಗಳು- ಟೆನ್ಯೂರ್ ಶಿಪ್​ಗಳಿಗೆ ತಿದ್ದುಪಡಿಗಳನ್ನು ತರಬೇಕು.
  • ಶಿಕ್ಷಕರ ವೃತ್ತಿ ಬೆಳವಣಿಗೆ ಹಾಗೂ ವೃತ್ತಿ ಬೆಳವಣಿಗೆ ಉನ್ನತಿ ಕುರಿತು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು.
  • ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಲಿಂಗತ್ವ ಮತ್ತು ವಿಶೇಷ ಸಾಮರ್ಥ್ಯವುಳ್ಳವರಿಗಾಗಿ (ವಿಕಲಚೇತನರು) ಅನುದಾನ ಸೇರಿ ಇತರ ಸಮಷ್ಟಿ ಶಿಕ್ಷಣಕ್ಕಾಗಿ ಕ್ರಮ ಕೈಗೊಳ್ಳಬೇಕು.

ಉನ್ನತ ಶಿಕ್ಷಣ ಹಂತಕ್ಕೆ ನಿರ್ದಿಷ್ಟ ಕ್ರಮಗಳು

  • ಕರ್ನಾಟಕ ಶಿಕ್ಷಣ ಕಾಯ್ದೆಯು (ಕೆಎಸ್​ಯುು) ಕೆಎಚ್​ಇಸಿ, ಕೆಎಚ್​ಇಜಿಸಿ, ಕೆಎಚ್​ಇಆರ್​ಸಿ, ಮತ್ತು ಕೆಆರ್​ಐಸಿಯಂತಹ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಗಳ ರಚಿಸಬೇಕು
  • ಉನ್ನತ ಶಿಕ್ಷಣ ಸಂಸ್ಥೆಗಳು ಆಡಳಿತ ಮಂಡಳಿ ರಚಿಸಬೇಕು.
  • ಮಾರ್ಗದರ್ಶನ ಕೇಂದ್ರಗಳನ್ನು ಗುರುತಿಸಬೇಕು. ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ತತ್ತ್ವಗಳ ಅನುಪಾಲನೆಯನ್ನು ಖಾತ್ರಿಗೊಳಿಸಲು ಕಾರ್ಯಾಗಾರಗಳನ್ನು ನಡೆಸಬೇಕು.
  • ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಸಾಂಸ್ಥಿಕ ಅಭಿವೃದ್ಧಿ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು.
  • ಸಂಶೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಹಾಗೂ ಬೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಎಂಬ ವರ್ಗೀಕರಣ ಮಾಡಬೇಕು.
  • ಕರ್ನಾಟಕ ಉನ್ನತ ಶಿಕ್ಷಣ ಆಯೋಗವು ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಗಳ ಮೇಲ್ವಿಚಾರಣೆ ಸೇರಿದಂತೆ ಉನ್ನತ ಶಿಕ್ಷಣ ವಲಯದ ಆಡಳಿತ ಮತ್ತು ನಿಯಂತ್ರಣವನ್ನು ನಿರ್ವಹಿಸಲಿದೆ. ಕರ್ನಾಟಕ ಉನ್ನತ ಶಿಕ್ಷಣ ಅನುದಾನ ಮಂಡಳಿ, ಕರ್ನಾಟಕ ಸಂಶೋಧನಾ ಮತ್ತು ನಾವೀನ್ಯತಾ ಮಂಡಳಿ, ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ ಇತ್ಯಾದಿಯನ್ನು ಇದು ಒಳಗೊಳ್ಳುತ್ತದೆ.

ಶಾಲಾ ಹಂತಕ್ಕೆ ನಿರ್ದಿಷ್ಟ ಕ್ರಮಗಳು

  • ಬುನಾದಿ (ಫೌಂಡೇಷನಲ್) ವರ್ಷಗಳ ಶಾಖೆ ಮತ್ತು ಅಕ್ಷರ ಜ್ಞಾನ- ಸಂಖ್ಯಾ ಜ್ಞಾನ ಶಾಖೆಗಳನ್ನು ಸ್ಥಾಪಿಸಬೇಕು.
  • ಬಾಲ್ಯಾರಂಭ ಶಿಕ್ಷಣಕ್ಕೆ ಅನುಗುಣವಾಗಿ ನಲಿ-ಕಲಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು.
  • ಯಶಸ್ವಿ ಶಾಲೆಗಳನ್ನು, ಅದರಲ್ಲೂ ಮುಖ್ಯವಾಗಿ ಕೆಪಿಎಸ್ ಮತ್ತು ಇನ್ನಿತರ ವಿಶೇಷ ಶಾಲೆಗಳನ್ನು ಗುರುತಿಸಿ ಅವುಗಳನ್ನು ಶಾಲಾ ಸಮುಚ್ಚಯ ಕೇಂದ್ರಗಳಾಗಿ ನಿರ್ವಿುಸಬೇಕು.
  • ಗುರು ಚೇತನ ಯೋಜನೆಯನ್ನು ಸದೃಢಗೊಳಿಸಿ ಅದನ್ನು ರಾಜ್ಯದಲ್ಲಿ ವಿಶೇಷ ಶಿಕ್ಷಣ ವೃತ್ತಿ ಬೆಳವಣಿಗೆ ವೇದಿಕೆಯನ್ನಾಗಿ ರೂಪಿಸಬೇಕು.

ಪಠ್ಯದ ಹೊರೆ ಕಡಿಮೆಗೆ ಸಲಹೆ

ಪಠ್ಯಕ್ರಮದ ಸುಧಾರಣೆಯು ಶಾಲಾ ಶಿಕ್ಷಣದ ಹಾಲಿ ಇರುವ ರಚನೆಯನ್ನು 5+3+3+4ರ (ಬುನಾದಿ, ಸಿದ್ಧತಾ, ಮಾಧ್ಯಮಿಕ ಹಾಗೂ ಪ್ರೌಢ ಹಂತ) ರಚನೆಗೆ ಪರಿವರ್ತಿಸಲು ಚಾಲನೆ ನೀಡಬೇಕು. ಒಂದೆಡೆ ಹನ್ನೊಂದು ಮತ್ತು ಹನ್ನೆರಡನೆಯ ತರಗತಿಗಳನ್ನು ಪ್ರೌಢ ಹಂತದೊಂದಿಗೆ ಸಮನ್ವಯಗೊಳಿಸುವ ಆಶಯವಿದ್ದರೆ ಮತ್ತೊಂದೆಡೆ ಆರಂಭಿಕ ವರ್ಷಗಳ ಶಾಖೆಯು 5 ವರ್ಷದ ಸಮಗ್ರ ಪಠ್ಯಕ್ರಮದ ಮೇಲೆ ಕೆಲಸ ಪ್ರಾರಂಭಿಸಬೇಕು. ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಪಠ್ಯಕ್ರಮವನ್ನು ಪರಿಷ್ಕರಿಸಬೇಕು. ನಿರ್ದಿಷ್ಟವಾಗಿ ಆರಂಭಿಕ ಹಾಗೂ ಸಿದ್ಧತಾ ಹಂತಗಳನ್ನು ಪರಿಷ್ಕರಿಸಿ ಹಾಲಿ ಇರುವ ಪಠ್ಯಕ್ರಮದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದೆ.

ಸದ್ಯಕ್ಕೆ ಶಾಲೆ ಆರಂಭ ಬೇಡ

ಬೆಂಗಳೂರು‘ ಶಾಲೆ ತೆರೆಯುವಂತೆ ಶಿಕ್ಷಣ ತಜ್ಞರು ಆಗ್ರಹಿಸುತ್ತಿರುವ ನಡುವೆಯೇ, ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ಸರ್ಕಾರಕ್ಕೆ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮನವಿ ಮಾಡಿದೆ. ಶಾಲೆಗಳನ್ನು ತೆರೆಯುವುದಕ್ಕೆ ಅವಸರ ಇಲ್ಲ. ಕರೊನಾ ಸೋಂಕು ಇಳಿಮುಖವಾದ ನಂತರ ಅಥವಾ ಕನಿಷ್ಠ ಒಂದು ತಿಂಗಳ ನಂತರ ಶಾಲೆ ತೆರೆಯುವುದು ಸೂಕ್ತ. ಹಂತ-ಹಂತವಾಗಿ ಶಾಲೆ ಪ್ರಾರಂಭಿಸಿ ಮತ್ತು ಮುಂದಿನ ಪರಿಸ್ಥಿತಿ ನೋಡಿ ಮುಂದುವರಿಸಲಿ ಮಕ್ಕಳ ಮೇಲೆ ಪ್ರಯೋಗ ಬೇಡ ಎಂದು ಅಭಿಪ್ರಾಯಪಟ್ಟಿದೆ. ಆನ್​ಲೈನ್ ಶಿಕ್ಷಣ ಪರ್ಯಾಯ ಮಾರ್ಗವಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಹಂತಗಳಲ್ಲಿ ಆನ್​ಲೈನ್ ಶಿಕ್ಷಣ ಬೋಧಿಸುವುದು ನಿಲ್ಲಿಸಬೇಕು. ಶಾಲೆ ಆರಂಭವಾಗುವ ಮೊದಲ ಎರಡು ದಿನ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಬೇಕು. ಎಂಬ ಶಿಫಾರಸುಗಳನ್ನು ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ರಾಜ್ಯ ಸಂಚಾಲಕ ವಾಸುದೇವ ಶರ್ಮಾ ಸಚಿವ ಸುರೇಶ್ ಕುಮಾರ್​ಗೆ ಸಲ್ಲಿಕೆ ಮಾಡಿದ್ದಾರೆ.