ಜಿಲ್ಲೆ

ವೈದ್ಯರಿಂದ ಸಮರ್ಪಣಾ ಮನೋಭಾವ ಸೇವೆ: ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠಗಳ ಸಹ ಸಂಚಾಲಕ ಫಣೀಶ್ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಅನಾದಿ ಕಾಲದಿಂದಲೂ ವೈದ್ಯರನ್ನು ಜೀವ ಉಳಿಸುವ ದೇವರೆಂದೆ ಪರಿಗಣಿಸಲಾಗಿದೆ ಎಂದು ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠಗಳ ಸಹ ಸಂಚಾಲಕ ಫಣೀಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ವೈದ್ಯಕೀಯ ಪ್ರಕೋಷ್ಠ, ಜಿಲ್ಲಾ ಬಿಜೆಪಿ ಘಟಕದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚಕ್ಕೆ ಆವರಿಸಿದ ಕೋವಿಡ್-19ರ ದಿನಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸೇವಾಕ್ಷೇತ್ರ ಮಾತ್ರ ತಮ್ಮ ಪ್ರಾಣದ ಅಂಗನ್ನು ತೊರೆದು ಸಕ್ರಿಯವಾಗಿ ರೋಗಿಗಳ ಸೇವೆಯಲ್ಲಿ ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದ್ದನ್ನು ಕಂಡಿದ್ದೇವೆ ಎಂದು ನುಡಿದರು.

ದೇವರನ್ನು ನಂಬಿಕೆಯಿಂದ ಪೂಜಿಸುತ್ತೇವೆ. ಆದರೆ ವೈದ್ಯರನ್ನು ದೇವರೆಂದೆ ಪರಿಣಿಸುತ್ತೇವೆ. ಆದರಿಂದಲೇ ನಮ್ಮ ಪೂರ್ವಿಕರು ವೈದ್ಯರನ್ನು ವೈದ್ಯೋನಾರಾಯಣೋ ಹರಿ: ಎಂದು ಪೂಜ್ಯಭಾವನೆಯಿಂದ ಗೌರವಿಸಿ ಕರೆಯಲಾಗುತ್ತದೆ ಎಂದು ನುಡಿದರು.

ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ ಮಾತನಾಡಿ, ಭಾರತದಲ್ಲಿ ವೈದ್ಯರಿಗೆ ಕೃತಜ್ಞತೆಯನ್ನು ತೋರಿಸಲು ಹಾಗೂ ನಿಸ್ವಾರ್ಥವಾಗಿ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅನುಪನ ಸೇವೆ ಸಲ್ಲಿಸಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಡಾ.ರಾಯ್ ಅವರ ಸ್ಮರಣೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಸಾಧನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ದಿನಾಚರಣೆ ಮಾಡಲಾತ್ತಿದೆ. ಅವರು 1882 ಜು.1ರಂದು ಜನಿಸಿ, 1962ರಲ್ಲಿ ಅದೇ ದಿನ ನಿಧನರಾಗಿದ್ದು ಕಾಕತಾಳಿಯವಾಗಿದೆ ಎಂದು ಸ್ಮರಿಸಿದರು.

ವೈದ್ಯ ಡಾ.ರಾಯ್ ಅವರು ಭಾರತದ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ದೇಶದ ವೈದ್ಯಕೀಯ ಗುಣಮಟ್ಟವನ್ನು ಹೆಚ್ಚಿಸುವುದರ ಜತೆಗೆ ಅವರ ಕೆಲಸವು ಭವಿಷ್ಯದ ಪೀಳಿಗೆಯ ವೈದ್ಯಕೀಯ ವೃತ್ತಿಪರರನ್ನು ಶ್ರೇಷ್ಟತೆ ಮತ್ತು ಸೇವೆಗಾಗಿ ಶ್ರಮಿಸಲು ಪ್ರೇರೇಪಿಸಿದೆ ಎಂದು ಸ್ಮರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಡಾ.ಮಂಚೇಗೌಡ, ಡಾ.ಕಾರ್ತಿಕ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಆನಂದ್, ಕಾರ್ಯದರ್ಶಿ ವಿವೇಕ್, ಶಿವಕುಮಾರ್ ಆರಾಧ್ಯ, ಪ್ರಸನ್ನ, ಚಂದ್ರ, ಆನಂದ್, ನಾಗನಂದ, ಮಹತಂಪ್ಪ, ಶಿವಣ್ಣ ಇತರರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ಸಿದ್ದರಾಮಯ್ಯ, ಡಾ.ಗೋಪಾಲಕೃಷ್ಣಗುಪ್ತ, ಡಾ.ಕೆ.ಜಿ.ಶಶಿಕಲಾ, ಡಾ.ಕಲಾಧರ್, ಡಾ.ಸಿ.ಟಿ.ಶ್ರೀನಿವಾಸ್ ಮತ್ತು ಮಿಮ್ಸ್ ರಕ್ತನಿಧಿ ಕೇಂದ್ರದ ಮಹಮದ್ ರಫಿಕ್ ಅವರನ್ನು ಗಣ್ಯರು ಅಭಿನಂಧಿಸಿದರು.