ಮಂಡ್ಯ: ಡೆಂಘೆ ಜ್ವರ ಒಂದು ಮಾರಕ ಕಾಯಿಲೆ. ಈ ಮಹಾಮಾರಿ ಡೆಂಘೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡೆಂಘೆ ಎಂಬ ಮಾರಕ ರೋಗವನ್ನು ಹೋಗಲಾಡಿಸುವ ಮೊದಲ ಔಷಧ ಎಂದರೆ ಅದು ಅರಿವು. ಸಾರ್ವಜನಿಕರು ಡೆಂಘೆ ಜ್ವರ ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ನಮ್ಮೆಲ್ಲರ ಆದ್ಯ ಕರ್ತವ್ಯ. ಡೆಂಘೆ ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಬಾರದಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆ. ಡೆಂಘೆ ಕುರಿತು ನಾವೆಲ್ಲರೂ ಜಾಗೃತರಾದರೆ ಮಹಾಮಾರಿಯನ್ನು ಹೋಗಲಾಡಿಸಬಹುದು. ಮಳೆಗಾಲ ಆರಂಭವಾಗುವುದರಿಂದ ಚರಂಡಿ ಹಾಗೂ ಅರ್ಧಕ್ಕೆ ನಿಂತು ಹೋದ ಕಟ್ಟಡಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸಾರ್ವಜನಿಕರು ತಮ್ಮ ಮನೆಗಳ ಮುಂಭಾಗದಲ್ಲಿ ಇರುವ ಚರಂಡಿಗಳನ್ನು ಸ್ವಚ್ಛಗೊಳಿಸಿ. ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸುವುದರಿಂದ ಡೆಂಘೆ ಜ್ವರವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಈ ಬಾರಿ ಡೆಂಘೆ ಜ್ವರದ ಘೋಷ ವಾಕ್ಯ ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ, ಮೊದಲು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲದರೂ ಸೊಳ್ಳೆ ಉತ್ಪತ್ತಿಯಾಗುವಂತಹ ಸ್ಥಳಗಳು ಇದ್ದರೆ ಅದನ್ನು ಗುರುತಿಸಿ ಸ್ವಚ್ಛಗೊಳಿಸಿ. ನೀರು ನಿಲ್ಲದಂತೆ ಸ್ವಚ್ಛಗೊಳಿಸಿದ ಸ್ಥಳಗಳನ್ನು ಮುಚ್ಚಿಡಿ ಎಂದು ಹೇಳಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು, ಡಾ.ಬೆಟ್ಟಸ್ವಾಮಿ, ಡಾ.ಎಂ.ಎನ್.ಆಶಾಲತಾ ಇತರರಿದ್ದರು.
ಮಾನವ ಸರಪಳಿ ನಿರ್ಮಾಣ: ರಾಷ್ಟ್ರೀಯ ಡೆಂಘೆ ಜ್ವರ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಂತರ ಎಸ್.ಡಿ.ಜಯರಾಂ ಪ್ಯಾರಾ ಮೆಡಿಕಲ್ ವಿಜ್ಞಾನ ಸಂಸ್ಥೆ ಮತ್ತು ಸದ್ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯವರೆಗೂ ಜಾಥಾ ನಡೆಯಿತು. ‘ಕೀಟ ಚಿಕ್ಕದು ಕಾಟ ದೊಡ್ಡದು’, ’ವಿದ್ಯೆ ಕದಿಯಲಾಗದ ಸಂಪತ್ತು ಆರೋಗ್ಯ ಕೊಳ್ಳಲಾಗದ ಸಂಪತ್ತು’, ’ಸ್ವಯಂ ರಕ್ಷಣಾ ವಿಧಾನವನ್ನು ಬಳಸಿ ಸೊಳ್ಳೆಗಳನ್ನು ನಿಯಂತ್ರಿಸಿ’ ಎಂಬ ಜಾಗೃತಿ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶನ ಮಾಡಿದರು.