ಜಿಲ್ಲೆ

ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸೊಳ್ಳೆಗಳ ಕಡಿತದಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ, ಝಿಕಾ ಸೋಂಕು ನಿಯಂತ್ರಣ ನಮ್ಮೆಲ್ಲರ ಗುರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಸರ್ಕಾರಿ/ಖಾಸಗಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ಡೆಂಘೆ ನಿಯಂತ್ರಣ ಕುರಿತ ಅಡ್ವೋಕೆಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಮನೆಯ ಸುತ್ತಮುತ್ತಲಿನ ಸ್ಥಳಗಳ ನೈರ್ಮಲ್ಯದ ಅಗತ್ಯದ ಬಗ್ಗೆ ತಿಳಿಸುವ ಆ.20 ಅನ್ನು ಸೊಳ್ಳೆಗಳ ದಿನವನ್ನಾಗಿ ಆಚರಿಸುತ್ತಿದ್ದೇವೆ. ರಕ್ತವೇ ಸೊಳ್ಳೆಗಳಿಗೆ ಆಹಾರ. ಶಾಲಾ ಮತ್ತು ಕಾಲೇಜು ಆವರಣ ಸೇರಿದಂತೆ ಅಲ್ಲಿನ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ಅಲ್ಲಿ ನೀರು ನಿಲ್ಲಿದಂತೆ ಎಚ್ಚರಿಕೆ ವಹಿಸಬೇಕು. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗಿ ಕ್ರಮೇಣ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಕೀಟ ಶಾಸಜ್ಞರಾದ ಜಾನೆಟ್ ಮಾತನಾಡಿ, ಹೆಣ್ಣು ಅನಾಫೆಲಿಸ್ ಸೊಳ್ಳೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಮಲೇರಿಯಾ ಹರಡುತ್ತದೆ. ಸೊಳ್ಳೆಗಳಿಂದ ದೇಶದಲ್ಲಿ ಒಂದು ವರ್ಷದಲ್ಲಿ 7 ಲಕ್ಷಗಳಿಗೂ ಹೆಚ್ಚು ಜನರು ಸಾಯುತ್ತಾರೆ ಎಂದರು.

ಟಿಎಚ್‌ಒ ಡಾ.ಜವರೇಗೌಡ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಡಾ.ಮಮತಾ, ಸೋಮಶೇಖರ್ ಇದ್ದರು.