ಬೆಂಗಳೂರು: ರಾಷ್ಟ್ರೀಯ ಸಹಕಾರ ನೀತಿ, ದೇಶದ ಆರ್ಥಿಕ ಅಭಿವೃದ್ಧಿಗೆ ಎರಡನೇ ಇಂಜಿನ್ ಆಗಲಿದೆ. 2047ರ ವೇಳೆಗೆ ಭಾರತ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಇದು ಸಹಾಯ ಮಾಡುತ್ತದೆ ಎಂದು ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ಹೇಳಿದ್ದಾರೆ.
ಪಟ್ಟಣ ಸಹಕಾರಿ ಬ್ಯಾಂಕ್‌ಗಳು, ಹೌಸಿಂಗ್, ಕ್ರೆಡಿಟ್, ಮಾರ್ಕೆಟಿಂಗ್ ಸೊಸೈಟಿ ಸೇರಿ ಇತರ ಸಹಕಾರಿ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಈ ನೀತಿ ಶಕ್ತಿ ತುಂಬಲಿದೆ. ಭವಿಷ್ಯದಲ್ಲಿ ಸಹಕಾರ ಕ್ಷೇತ್ರ, ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲಿದೆ. ಸಹಕಾರಿ ಸಂಘಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡಲಿದೆ. ಸಹಕಾರಿ ಸಿಬ್ಬಂದಿ ನೇಮಕಾತಿ ಸಂಸ್ಥೆ ಸ್ಥಾಪನೆ, ಸಹಕಾರಿ ಲೆಕ್ಕ ಪರಿಶೋಧನೆ ಮತ್ತು ಆರ್ಥಿಕ ಹತೋಟಿ ಬೋರ್ಡ್ ಸ್ಥಾಪನೆ ಹಾಗೂ ಸಹಕಾರಿ ಟ್ರಿಬ್ಯೂನಲ್ ಆರಂಭಿಸುವ ಶಿಾರಸುಗಳನ್ನು ಈ ನೀತಿ ಒಳಗೊಂಡಿದೆ. ಹಾಗಾಗಿ, ಸಹಕಾರಿ ಸಂಸ್ಥೆಗಳು ಇ-ಕಾಮರ್ಸ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವೆಂಕಟೇಶ್ ಸಲಹೆ ನೀಡಿದ್ದಾರೆ.
ದೊಡ್ಡ ಗ್ರಾಹಕರ ನೆಲೆ ಕಂಡುಕೊಳ್ಳಲು, ಉತ್ತಮ ಬೆಲೆ ಸಾಧಿಸಲು, ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಸೇರಿ ಬಹು ಆಯಾಮದ ವಿಸ್ತರಣೆ ಉತ್ತೇಜಿಸಲು ಮತ್ತು ಸದಸ್ಯರ ಆದಾಯ ಹೆಚ್ಚಿಸಲು ನೀತಿ ಸಹಕಾರಿಯಾಗಿದೆ. ಮುಂದಿನ 20 ವರ್ಷಗಳಲ್ಲಿ ದೇಶದ ಸಹಕಾರಿ ಚಳವಳಿಯ ದಿಕ್ಕನ್ನೇ ಬದಲಾಯಿಸಲಿದೆ. ಆಡಳಿತ ವ್ಯವಸ್ಥೆ ಬಲವರ್ಧನೆ, ಸಹಕಾರ ಸಂಸ್ಥೆಗಳ ಬೆಳವಣಿಗೆ, ಭವಿಷ್ಯದ ಸವಾಲುಗಳ ಸಿದ್ಧತೆ, ಎಲ್ಲರನ್ನೂ ಒಳಗೊಳ್ಳುವ ಸಂಪರ್ಕ, ಸೇವೆಗಳ ವಿಸ್ತರಣೆಗೆ ಅನುಕೂಲವಾಗಲಿದೆ. ರಾಷ್ಟ್ರದಲ್ಲಿ ನೂತನವಾಗಿ 2 ಲಕ್ಷ ಬಹುಸೇವಾ ಪ್ರಾಥಮಿಕ ಕೃಷಿಪತ್ತಿನ ಸೇವಾ ಸಹಕಾರ ಸಂಘಗಳು, ಹೈನುಗಾರಿಕೆ ಸಂಘ ಮತ್ತು ಮೀನುಗಾರಿಕೆ ಸಂಘಗಳು ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದ್ದಾರೆ.