ರಾಯಚೂರು: ಬೆಳಗಾವಿಯಲ್ಲಿ ಅ.2 ಮತ್ತು 3ರಂದು ಕುರುಬ ಸಮಾಜದ 9ನೇ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ ಎಂದು ಭಾರತ ಕುರುಬ ಸಮಾಜ ಸಂಘಟನೆ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಾಜಿ ಸಚಿವ ಎಚ್.ವಿಶ್ವನಾಥ ಅಧ್ಯಕ್ಷತೆಯಲ್ಲಿ ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸಮಾಜದ ಜನರನ್ನು ಒಗ್ಗೂಡಿಸಲು 2014ರಲ್ಲಿ ಸಂಘಟನೆಯನ್ನು ಕಟ್ಟಲಾಗಿದ್ದು, ದೇಶದ ವಿವಿಧ ರಾಜ್ಯದಲ್ಲಿ 8 ಸಮಾವೇಶ ನಡೆಸಲಾಗಿದ್ದು, ಬೆಳಗಾವಿಯಲ್ಲಿ 9ನೇ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಅ.2 ರಂದು ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಯಲಿದೆ. ಅ.3 ರಂದು ರಾಷ್ಟ್ರೀಯ ಸಮಾವೇಶ ಹಾಗೂ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ವಿವಿಧ ರಾಜ್ಯಗಳ ಸಮಾಜದ ಮುಖಂಡರುಗಳು, ಸಮುದಾಯ ಜನರು ಭಾಗವಹಿಸಲಿದ್ದಾರೆ.
ಗುಜರಾತ್‌ನಲ್ಲಿ ಜರುಗಿದ ರಾಷ್ಟ್ರೀಯ ಸಮಾವೇಶ ನಡೆದಾಗ ತೆಗೆದುಕೊಂಡು ನಿರ್ಧಾರದಿಂದ ಭೂಮಿ ಸೇರಿದಂತೆ ಇತರೆ ಬೇಡಿಕೆಗಳಿಗೆ ಅಲ್ಲಿನ ಸರ್ಕಾರ ಈಡೇರಿಸುವ ಭರವಸೆ ನೀಡಿದೆ. ಅದೇ ರೀತಿ ಗೋವಾದಲ್ಲಿ ನಡೆದ ಸಮಾವೇಶದಿಂದ ಸಮೂದಾಯವನ್ನು ಎಸ್‌ಟಿ ಸೇರ್ಪಡೆ ಮಾಡಲು ಅಲ್ಲಿಯ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಹಿಂದುಳಿದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕುಲಶಾಸ ಅಧ್ಯಯನ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ದೇಶದಲ್ಲಿ ಸುಮಾರು 18 ಕೋಟಿ ಜನಸಂಖ್ಯೆ ಹೊಂದಿರುವ ಕುರುಬ ಸಮಾಜ ಸಾಮಾಜಿಕ, ರಾಜಕೀಯವಾಗಿ ಹಿಂದುಳಿದೆ. ಎಸ್‌ಟಿ ಸೇರ್ಪಡೆಯಾಗುವುದರಿಂದ ಬೇರೆಯವರ ಮೀಸಲಾತಿ ಹಕ್ಕನ್ನು ನಾವು ಕಿತ್ತಿಕೊಳ್ಳುವುದಿಲ್ಲ. ಪ್ರತ್ಯೇಕ ಮೀಸಲಾತಿ ನಿಗದಿ ಮಾಡಲು ಒತ್ತಾಯ ಹೇರಲಾಗುತ್ತಿದೆ.
ಹಿಂದುಳಿದ ವರ್ಗದಲ್ಲಿ ನಿಗದಿಯಾದ ಮೀಸಲಾತಿ ಉಳಿದ ಸಮುದಾಯಗಳಿಗೆ ಹಂಚಿಕೆ ಮಾಡಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗ ರಚನೆಯಾಗಿದ್ದು, ಮೀಸಲು ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದೆ ಎಚ್.ಎಂ.ರೇವಣ್ಣ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ನಾಗರಾಜ, ಉಪಾದ್ಯಕ್ಷ ಜಿದ್ದಿಮನಿ, ಪದಾಕಾರಿಗಳಾದ ಎಂ.ನಾಗರಾಜ, ಮಲ್ಲಿಕಾರ್ಜುನ ಏಗನೂರು, ನೀಲಕಂಠ ಬೇವಿನ್, ಆಂಜಿನಯ್ಯ ಉಪಸ್ಥಿತರಿದ್ದರು.