ಉಡುಪಿ: ಗ್ರಾಹಕರ ರಕ್ಷಣೆಗಾಗಿಯೇ ಅನೇಕ ಹಕ್ಕು ಮತ್ತು ಕಾನೂನುಗಳಿವೆ. ಪ್ರತಿಯೊಬ್ಬರೂ ಈ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ವಂಚನೆ ಮತ್ತು ಮೋಸದಿಂದ ಪಾರಾಗಲು ಸಾಧ್ಯ. ಇ-ಕಾಮರ್ಸ್ ಮತ್ತು ಆನ್ಲೈನ್ ಮೂಲಕ ಸೇವೆ ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ, ಸಂಪೂರ್ಣ ಮಾಹಿತಿಯೊಂದಿಗೆ ವ್ಯವಹರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಹೇಳಿದರು.
ಎಸ್.ಎಂ.ಎಸ್.ಪಿ. ಸಂಸತ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರು ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ಅದರ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಕೊನೆಯ ದಿನಾಂಕ ಪರಿಶೀಲಿಸಿ, ಖರೀದಿಸಬೇಕು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಯೋಗೀಶ್ ಮಾತನಾಡಿ, ಗ್ರಾಹಕ ತನ್ನ ಸೇವೆಯಿಂದ ವಂಚಿತನಾಗುತ್ತಿದ್ದಾನೆ ಎಂದು ಭಾವಿಸಿದಾಗ ತ್ವರಿತ ನ್ಯಾಯ ಪಡೆಯಲು ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅಥವಾ ಬಳಕೆದಾರರ ವೇದಿಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇದರಿಂದ ಕಡಿಮೆ ಶುಲ್ಕ ಪಾವತಿಸುವುದರೊಂದಿಗೆ ಶೀಘ್ರವಾಗಿ ತೀಮಾರ್ನ ದೊರಕಿಸಿಕೊಡುವಲ್ಲಿ ಬಳಕೆದಾರರ ವೇದಿಕೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಾರುಕಟ್ಟೆಯ ವ್ಯವಹಾರಗಳು ಬದಲಾಗುತ್ತಿದ್ದು, ಗ್ರಾಹಕರಲ್ಲಿ ನಿರಂತರ ಜಾಗೃತಿ ಅವಶ್ಯಕ. ಗ್ರಾಹಕರು ಕಾನೂನನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡಾಗ ಮಾತ್ರ ಅದರ ಶಕ್ತಿ ಅರಿವಿಗೆ ಬರುತ್ತದೆ ಎಂದರು.
ಎಸ್.ಎಂ.ಎಸ್.ಪಿ ಸಂಸತ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಸತ್ಯನಾರಾಯಣ ಪಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ತೆಂಕಪೇಟೆ ವಾರ್ಡ್ ನಗರಸಭೆ ಸದಸ್ಯೆ ಮಾನಸ ಸಿ.ಪೈ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಸುನಿಲ್ ತಿ. ಮಾಸರಡ್ಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಸುಜಾತಾ ಬಿ., ಬಳಕೆದಾರರ ವೇದಿಕೆಯ ಸಂಚಾಲಕ ಯು.ಜಿ ಕಾಮತ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡ್ಕೆ ಮತ್ತಿತರರು ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಸ್ವಾಗತಿಸಿ, ಬಳಕೆದಾರರ ವೇದಿಕೆಯ ಹರಿಕೃಷ್ಣ ಶಿವತ್ತಾಯ ನಿರೂಪಿಸಿ, ವಂದಿಸಿದರು.