ಜಿಲ್ಲೆ

ಅಂತಾರಾಷ್ಟ್ರೀಯ ಪಂಜ ಕುಸ್ತಿಗೆ ಬಾಬ ಆಯ್ಕೆ: ಛತ್ತೀಸ್‌ಗಡದಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

ಮಂಡ್ಯ: ಛತ್ತೀಸ್‌ಗಢದ ರಾಯಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಬಲಗೈ ಮತ್ತು ಎಡಗೈ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಮಂಡ್ಯದ ಎಂ.ಬಾಬ ತೃತೀಯ ಬಹುಮಾನ ಪಡೆದಿದ್ದಾರೆ. ಅಂತೆಯೇ ಅಕ್ಟೋಬರ್ ತಿಂಗಳಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಪಂದ್ಯಾವಳಿಯಲ್ಲಿ 1800ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅದರಂತೆ ಕರ್ನಾಟಕದಿಂದ 15 ಜನರು ಭಾಗವಹಿಸಿದ್ದು, ಈ ಪೈಕಿ ಬಾಬ ಬಹುಮಾನ ಗೆದ್ದು ಕೊಂಡಿದ್ದಾರೆ. ಶ್ಯಾಮ್ ಸುಂದರ್ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಮಂಡ್ಯ ನಗರದ ಶಂಕರಮಠ ಬಡಾವಣೆಯ ಎಂ.ಬಾಬ ಅವರು ರ‌್ಯಾಂಬೋ ಜಿಮ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪಂಜ ಕುಸ್ತಿ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವನಾಥ್ ಹಾಗೂ ರ‌್ಯಾಂಬೋ ಜಿಮ್ ಮಾಲೀಕ ಚೇತನ್‌ಕುಮಾರ್ ತಿಳಿಸಿದ್ದಾರೆ.