ಜಿಲ್ಲೆ

ಪೌಷ್ಟಿಕ ಆಹಾರವೇ ಔಷಧ ಮಾಡಿಕೊಳ್ಳುವಂತಾಗಲಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಇತ್ತೀಚಿನ ದಿನದಲ್ಲಿ ಜನರು ಹೆಚ್ಚಾಗಿ ಇಂಗ್ಲೀಷ್ ಔಷಧಕ್ಕೆ ಅವಲಂಬಿತರಾಗಿರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಒಳ್ಳೆಯ ಆರೋಗ್ಯಯುತ ಪೌಷ್ಟಿಕ ಆಹಾರವನ್ನು ಸೇವಿಸಿ ಅದನ್ನೇ ಔಷಧವನ್ನಾಗಿ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ‘ಜಾಗತಿಕ ಅರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಎಂಬ ಧ್ಯೇಯವಾಕ್ಯ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆಹಾರವೇ ಔಷಧಯಾಗಬೇಕು ಎಂಬ ವಿಜ್ಞಾನ ಯಾವುದಾದರೂ ಇದ್ದರೆ ಅದು ಆಯುರ್ವೇದ ಮಾತ್ರ. ಆದ್ದರಿಂದ ನಮ್ಮ ಪೂರ್ವಜರು ನಮಗಾಗಿ ಗಿಡಮೂಲಿಕೆಗಳಿಂದ ತಯಾರು ಮಾಡಿರುವಂತಹ ಆಯುರ್ವೇದ ಔಷಧ ಬಳಸುತ್ತಿದ್ದಾರೆ. ನಮ್ಮ ದೇಶ ಈಗಲೂ ಅದನ್ನು ಉಳಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಆಯುರ್ವೇದ ಔಷಧಿಯನ್ನು ಹೆಚ್ಚು ಬಳಕೆ ಮಾಡಿ ಎಂದು ಹೇಳಿದರು.

ಮಹರ್ಷಿ ಧನ್ವಂತರಿ ಪುಣ್ಯ ಸ್ಮರಣೆ ನಡೆಸಿಕೊಂಡು ಅವರ ಹೆಸರಿನಲ್ಲಿ ಆಯುರ್ವೇದ ದಿನಾಚರಣೆ ಮಾಡುತ್ತಿದ್ದೇವೆ. ಇತ್ತೀಚೆಗೆ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಈಗಿನ ಜೀವನ ವ್ಯವಸ್ಥೆಯಾಗಿದೆ. ಭಾರತದಲ್ಲಿ ಆಯುರ್ವೇದ ಔಷಧಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ಸಾಮಾನ್ಯ ಜನರು ಆಯುರ್ವೇದ ಔಷಧಗಳನ್ನೇ ಬಳಸಿದರೆ ಗುಣಮುಖರಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ನಿರಂತರವಾಗಿ ಆರೋಗ್ಯವಂತರಾಗಿ ಇರುವಂತೆ ಮಾಡುತ್ತದೆ. ಆಯುರ್ವೇದ ಔಷಧಿಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಆಯುಷ್ ಇಲಾಖೆ ವೈದ್ಯ ಡಾ.ಲೋಕೇಶ್, ಭಾರತೀಯ ಪುರಾಣಗಳ ಪ್ರಕಾರ ಋಷಿ ಧನ್ವಂತರಿಯು ಸಾಗರದ ಮಂಥನದ ಕೊನೆಯಲ್ಲಿ ಪವಿತ್ರವಾದ ಅಮೃತದೊಂದಿಗೆ ಕಾಣಿಸಿಕೊಂಡರು. ಈ ಅಮರತ್ವದ ಅಮೃತಕ್ಕಾಗಿ ದೇವತೆಗಳು ಮತ್ತು ಅಸುರರು ಬಹಳ ಕಾಲ ಜಗಳವಾಡಿದ್ದರು. ಧನ್ವಂತರಿಯನ್ನು ದೇವತೆಗಳು ವೈದ್ಯರು ಎಂದು ಕರೆದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಮಂಡ್ಯ ಶಾಖೆ ಅಧ್ಯಕ್ಷ ಡಾ.ಕಲಾಧರ್, ರೈತ ನಾಯಕಿ ಸುನಂದಾ ಜಯರಾಂ, ತಜ್ಞ ವೈದ್ಯೆ ಡಾ.ಶ್ರುತಿ ಶರ್ಮಾ, ಆಯುಷ್ ಇಲಾಖೆಯ ಡಾ.ರಮ್ಯಾ ಇತರರಿದ್ದರು. ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳಿಗೆ ಧನ್ವಂತರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.