ಮಂಡ್ಯ: ಪ್ರಾಚೀನ ಭಾರತದಲ್ಲಿ ಆಹಾರವೇ ಔಷಧವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಬದಲಾವಣೆಯಿಂದ ಇಂಗ್ಲೀಷ್ ಔಷಧಕ್ಕೆ ಮೊರೆ ಹೋಗಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಲಕ್ಮೀ ಜನಾರ್ದನ ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವನದ ಆರೋಗ್ಯ ವೃದ್ಧಿಯಾಗಲು ಧನ್ವಂತರಿ ಸ್ಮರಣೆ ಅಗತ್ಯ ಎಂದರು.
ಮಹರ್ಷಿ ಧನ್ವಂತರಿ ಅವರು ಕ್ರಿಸ್ತ ಪೂರ್ವದಲ್ಲಿಯೇ ಆರೋಗ್ಯದ ಬಗ್ಗೆ ಸಂಶೋಧನೆ ನಡೆಸಿ ಆಯುರ್ವೇದ ವಿಜ್ಞಾನದ ಬಗ್ಗೆ ತಿಳಿಸಿ ಹೋಗಿದ್ದಾರೆ. ಪ್ರಕೃತಿಯನ್ನೇ ಅವಲಂಬಿಸಿ ಪ್ರಕೃತಿಯಲ್ಲಿರುವ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಔಷಧ ತಯಾರಿಕೆ ಮಾಡಿ ಜಗತ್ತಿನ ಆಯುರ್ವೇದಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಯುರ್ವೇದ ಔಷಧ ಮಾಡುವ ತಜ್ಞರಿಗೆ ಹಿಂದೆ ರಾಜಾಶ್ರಯ ಸಿಗುತ್ತಿತ್ತು. ಹಾಗಾಗಿಯೇ ಗಣಿತಶಾಸ್ತ್ರ, ಯೋಗಶಾಸ್ತ್ರದ ಬಗ್ಗೆ ಭಾರತದಲ್ಲಿ ಪ್ರಾಚೀನ ಕಾಲದಲ್ಲೇ ಸಂಶೋಧನೆಗಳು ನಡೆದಿವೆ. ಆರ್ಯಭಟ, ವರಹಮಿರ್, ಯಾಜ್ಞವಲ್ಕ್ಯ, ಧನ್ವಂತರಿ ಸೇರಿದಂತೆ ಹಲವಾರು ತತ್ವಜ್ಞಾನಿಗಳು ಮಾಡಿ ಹೋಗಿರುವ ಸಂಶೋಧನೆಯನ್ನೇ ನಾವು ಇತ್ತೀಚಿಗೆ ಹೊಸ ತಂತ್ರ ಉಪಯೋಗಿಸಿ ಇನ್ನೊಂದು ರೂಪ ಕೊಟ್ಟಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಹುಟ್ಟಿನಿಂದ ಸಾವಿನ ನಡುವೆ ಇರುವ ಜೀವನದಲ್ಲಿ ಸಾಧನೆ ಅವಶ್ಯಕ. ಮಹಾನ್ ವ್ಯಕ್ತಿಗಳು ನೋವಿನಲ್ಲಿ ಸಂತಸವಿದೆ. ನೋವನ್ನು ಗೆದ್ದಾಗ ಜೀವನದ ಯಾವುದೇ ಸಾಧನೆ ಮಾಡಬಹುದು. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಆಯುರ್ವೇದದ ಬಗ್ಗೆ ಅಧ್ಯಯನ ನಡೆದಿದೆ. ಮೊದಲು ಇಂದು ನಾವೂ ಔಷಧ ಸೇವನೆ ಮಾಡುವ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಲಾಗುತ್ತಿತ್ತು. ಆಹಾರದಲ್ಲಿ ಹೆಚ್ಚು ಆಯುರ್ವೇದ ಔಷಧ ಗುಣವುಳ್ಳ ಆಹಾರವನ್ನು ಸೇವಿಸಲಾಗುತ್ತಿತ್ತು. ಆದರೆ ಇಂದು ಜೀವನಶೈಲಿ ಬದಲಾಗಿದ್ದು, ಕಾಯಿಲೆಗಳಿಂದ ಆಹಾರದ ರೀತಿ ಔಷಧ ಸೇವನೆ ಮಾಡುತ್ತಿದ್ದೇವೆ. ನಮ್ಮ ಸುತ್ತ ಮುತ್ತಲು ಔಷಧ ಗುಣವುಳ್ಳ ಆಹಾರವಿದ್ದು, ಅವುಗಳ ಸೇವನೆ ಮಾಡಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ನಗರಸಭೆ ಸದಸ್ಯ ಅರುಣ್‌ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮೀ, ಡಾ.ಎ.ಎಸ್.ಚಂದ್ರಶೇಖರ್ ಇತರರಿದ್ದರು.