raichur 
ಜಿಲ್ಲೆ

ಆಯುಷ್ ಇಲಾಖೆಯಿಂದ ರಾಷ್ಟ್ರೀಯ ಆಯುರ್ವೇದ ದಿನ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಪೂರಕ: ನರಸಮ್ಮ ಮಾಡಗಿರಿ

ರಾಯಚೂರು ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯಕ್ಕೆ ಆಯುರ್ವೇದವು ಪೂರಕವಾಗಿದೆ. ಆಯುರ್ವೇದದ ಮೌಲ್ಯಿಕ ಅಂಶಗಳನ್ನು ಎಲ್ಲರೂ ಅರಿತು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಹೇಳಿದರು.

ನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯಿಂದ ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಮಂಗಳವಾರ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ವೈದ್ಯರು, ಅಲೋಪತಿ ಮತ್ತು ಹೋಮಿಯೋಪಥಿ ಪ್ರಾಕ್ಟೀಸ್ ಮಾಡದೆ ಚಿಕಿತ್ಸೆ ನೀಡುತ್ತಿರುವುದು ಕಾನೂನು ಬಾಹೀರವಾಗಿದ್ದು, ಅದರಡಿ ಕೆಲ ವೈದ್ಯರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಮಾತನಾಡಿ, ನಮ್ಮ ಮನಸ್ಸು, ಆತ್ಮ ಮತ್ತು ದೇಹ ಮೂರೂ ಆರೋಗ್ಯವಾಗಿದ್ದಲ್ಲಿ ಮನುಷ್ಯ ಸದಾಕಾಲ ಚೇತನದಿಂದಿರಲು ಸಾಧ್ಯಾಗುತ್ತದೆ. ಇಡೀ ಭರತ ಖಂಡದಲ್ಲಿ ಇಂದಿನ ದಿನ ಉತ್ತರಾರ್ಧ ಗೋಳದಲ್ಲಿ ಸೂರ್ಯನು ದಕ್ಷಿಣಾರ್ಧದಲ್ಲಿ ಚಲಿಸುವುದರಿಂದ 12 ಗಂಟೆ ಹಗಲು ಮತ್ತು 12 ಗಂಟೆ ರಾತ್ರಿ ಸಮತಲವಾಗಿರುತ್ತದೆ. ಆದ್ದರಿಂದ ಈ ದಿನದಂದೇ ನಮ್ಮ ಆಯುಷ್ ಇಲಾಖೆಯಿಂದ ಆಯುರ್ವೇದ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಡಿಎಚ್‌ಓ ಡಾ.ಸುರೇಂದ್ರಬಾಬು ಮಾತನಾಡಿ, ಸುಮಾರು 9 ವರ್ಷಗಳಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದನ್ನು ಅಂತಾರಾಷ್ಟ್ರೀಯವಾಗಿ ಮತ್ತು ಪ್ರಪಂಚದಾದ್ಯಂತ ಆಚರಿಸಲು ನಾವೆಲ್ಲ ನಮ್ಮ ಆಯುರ್ವೇದ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯಶನ್ ಅಧ್ಯಕ್ಷ ಡಾ.ದೇಶಪಾಂಡೆ, ಡಾ.ಕಣಕಾಲಕ್ಷ್ಮಿ , ಡಾ.ನವೀನ್ ಹಾಗೂ ಡಾ.ಪೂಜಾ ಇದ್ದರು.