ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಧುಮೇಹ ತಜ್ಞೆ ಡಾ. ಸಂಧ್ಯಾ ಕುಲಕರ್ಣಿ ಅವರಿಗೆ ಪ್ರತಿಷ್ಠಿತ ರಿಸರ್ಚ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ- ಯುನೈಟೆಡ್ ಸ್ಟೇಟ್ಸ್ ವೈಟಲ್ಸ್ (ಆರ್ಎಸ್ಎಸ್ಡಿಐ-ಯುಎಸ್ವಿ) 2024 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನ. 15ರಂದು ದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಏರ್ಪಡಿಸಿದ್ದ ಆರ್ಎಸ್ಎಸ್ಡಿಐ ವಾರ್ಷಿಕ ಸಮ್ಮೇಳನದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರಸಿಂಗ್ ಡಾ. ಸಂಧ್ಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮಧುಮೇಹ ತಡೆ ಮತ್ತು ಚಿಕಿತ್ಸೆ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ವೈದ್ಯರಿಗೆ ಈ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ದೇಶದ 28 ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ. ಸಂಧ್ಯಾ ಈ ವರ್ಷ ಪ್ರಶಸ್ತಿಗೆ ಪಾತ್ರರಾದ ಉತ್ತರ ಕರ್ನಾಟಕದ ಏಕೈಕ ವೈದ್ಯೆ.
ಡಾ. ಸಂಧ್ಯಾ ಧಾರವಾಡದಲ್ಲಿ ತಮ್ಮ ತೇಜಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿದ್ದು, 25 ವರ್ಷಗಳಿಂದ ನಿರಂತರವಾಗಿ ಮಧುಮೇಹ ತಡೆ ಮತ್ತು ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಲು ಉಚಿತ ಶಿಬಿರಗಳನ್ನು ಏರ್ಪಡಿಸುತ್ತಿದ್ದಾರೆ.