ಜಿಲ್ಲೆ

ಪಿಎಫ್‌ಪಿಸಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಆದರ್ಶ್. ಎಂ.ಕೆ.

ಮಡಿಕೇರಿ: ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ಗೆ ಪ್ರತಿಷ್ಠಿತ ಸಿಐಐ-ಎಫ್‌ಪಿಒ ಎಕ್ಸಲೆನ್ಸ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಇದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವೆಂದು ಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದರು.

ಪ್ರಶಸ್ತಿಗಾಗಿ ಅರ್ಹತೆ ಪಡೆದ ದೇಶದ ೧೪೪ ಉತ್ತಮ ರೈತ ಉತ್ಪಾದಕ ಕಂಪನಿಗಳಲ್ಲಿ ಈಶಾ ಫೌಂಡೇಶನ್‌ನ ೨೫ ಎಫ್‌ಪಿಒಗಳಲ್ಲಿ ಒಂದಾದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಲ್ಕು ಮಾದರಿಯ ಪ್ರಶಸ್ತಿಗಳಲ್ಲಿ ಖರೀದಿ ಮತ್ತು ಮಾರಾಟ ವ್ಯವಹಾರದ ಯಶಸ್ಸಿಗಾಗಿ ನಮ್ಮ ಸಂಸ್ಥೆಗೆ ಪ್ರಶಸ್ತಿ ಲಭಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದಾದ್ಯಂತದ ರೈತ ಉತ್ಪಾದಕ ಕಂಪನಿಗಳೊಂದಿಗೆ ಸ್ಪರ್ಧಿಸಿ, ಕಠಿಣ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪೊನ್ನಾಡ್ ಎಫ್‌ಪಿಒ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಿಐಐ-ಎಫ್‌ಪಿಒ ಶೃಂಗಸಭೆಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಿನಾಜ್ ಆಲಂ ಅವರಿಂದ ನಾನು, ಈಶಾ ಔಟ್ರೇಚ್‌ನ ಮಾ.ಚಂದ್ರಹಾಸ ಹಾಗೂ ಪೊನ್ನಾಡ್ ಎಫ್‌ಪಿಒದ ಮಹಿಳಾ ನಿರ್ದೇಶಕಿ ರತ್ನಾ ಚರ್ಮಣ್ಣ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದಾಗಿ ಹೇಳಿದರು.

ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅನ್ನು ೨೦೨೧ ರಲ್ಲಿ ಸ್ಥಾಪಿಸಲಾಯಿತು. ಈಶಾ ಸಂಸ್ಥೆ ಪೂರ್ಣ ಸಮಯದ ಸ್ವಯಂಸೇವಕರು ನಿರ್ದೇಶಕರನ್ನು ಒಟ್ಟುಗೂಡಿಸಲು ಸಹಕರಿಸಿತು. ಕೇವಲ ೨ ರಿಂದ ೩ ವಾರಗಳ ಅಲ್ಪಾವಧಿಯಲ್ಲಿ, ೩೦೮ ಸದಸ್ಯರನ್ನು ಸಜ್ಜುಗೊಳಿಸಿ ಕಂಪನಿಯನ್ನು ರಚಿಸಲಾಯಿತು. ವ್ಯಾಪಾರ ಆರಂಭಿಸಿದ ಮೊದಲ ವರ್ಷದಲ್ಲಿ, ಕಂಪನಿಯು ೨೦ ಮೆಟ್ರಿಕ್ ಟನ್ ಕಾಫಿಯನ್ನು ಒಟ್ಟುಗೂಡಿಸಿ ೪೯ ಲಕ್ಷ ರೂಪಾಯಿಗಳ ವಹಿವಾಟು ನಡೆಸಿತು. ೨೦೨೩-೨೪ರಲ್ಲಿ ಕಂಪನಿಯು ಕಾಫಿಯನ್ನು ಒಟ್ಟುಗೂಡಿಸಿ ೮.೫ ಕೋಟಿ ರೂ.ಗಳ ವಹಿವಾಟು ನಡೆಸಿತು. ರೈತರ ಸಹಕಾರವೇ ಈ ಯಶಸ್ಸಿಗೆ ಕಾರಣ ಎಂದು ಮನು ಮುತ್ತಪ್ಪ ತಿಳಿಸಿದರು.

ಸಣ್ಣ ಮತ್ತು ಅತಿಸಣ್ಣ ರೈತರ ಹಿತ ಕಾಯುವುದಕ್ಕಾಗಿ ಕೇಂದ್ರ ಸರಕಾರ ನಬಾರ್ಡ್ ಸಹಯೋಗದೊಂದಿಗೆ ರೈತ ಉತ್ಪಾದಕ ಕೇಂದ್ರಗಳಿಗೆ ಉತ್ತೇಜನ ನೀಡಿತು. ೨೦೨೧ ರಲ್ಲಿ ೧೦ ಸಾವಿರ ನೂತನ ರೈತ ಉತ್ಪಾದಕ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಕೊಡಗು ಜಿಲ್ಲೆಯ ನಾಪೋಕ್ಲು ಮತ್ತು ವಿರಾಜಪೇಟೆಯಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿರುವ ಕೇಂದ್ರಗಳಿಗೆ ಈಶಾ ಫೌಂಡೇಶನ್ ಸ್ವಯಂ ಸೇವಕರನ್ನು ಒದಗಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಯಶಸ್ವಿಗೊಳಿಸಲು ಈಶಾ ಫೌಂಡೇಶನ್ ನ ಸಹಭಾಗಿತ್ವ ಹೆಚ್ಚು ಸಹಕಾರಿಯಾಗಿದೆ. ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಬ್ರಾಂಡ್‌ನ ಕಾಫಿ ಹೆಚ್ಚು ಜನಪ್ರಿಯವಾಗಿದೆ ಎಂದು ವಿವರಿಸಿದರು.

ಪೊನ್ನಾಡ್ ಎಫ್‌ಪಿಸಿಎಲ್ ತನ್ನ ೩ನೇ ಹಂತದ ಸದಸ್ಯ ನೋಂದಾವಣಿ ಆರಂಭಿಸಿದೆ. ನಾಪೋಕ್ಲು ಹೋಬಳಿಯಲ್ಲಿ ಹೊಸ ಸದಸ್ಯರನ್ನು ಇದಕ್ಕೆ ಆಹ್ವಾನ ಮಾಡುತ್ತಾ, ಸಮಿತಿಯು ಅನುಮೋದಿಸಿದ ನಂತರ ಸದಸ್ಯತ್ವವನ್ನು ದೃಢೀಕರಿಸಲಾಗುತ್ತದೆ. ೩ನೇ ಹಂತದಲ್ಲಿ ೭೫೦ ರೈತ ಸದಸ್ಯರನ್ನು ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ. ಸದಸ್ಯತ್ವವನ್ನು ಪಡೆಯಲು ಕೊನೆಯ ದಿನಾಂಕ ೨೦೨೪ ಡಿ.೩೧ ಆಗಿದೆ ಎಂದು ಮನು ಮುತ್ತಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕುಲ್ಲೇಟಿರ ಅಜಿತ್ ನಾಣಯ್ಯ, ಕೋಡಿರ ಪ್ರಸನ್ನ, ಕಾಟುಮಣಿಯಂಡ ಉಮೇಶ್ ಹಾಗೂ ಪವಿತ್ರ ಉಪಸ್ಥಿತರಿದ್ದರು.