ಯಾದಗಿರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾದ್ಯಂತ 10ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಕಾರ್ಯಕ್ರಮದ ಯಶಸ್ವಿಗಾಗಿ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ನಿಮಿತ್ತ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಂತುಹುಳ ನಾಶಕ ಅಲ್ಬೆಂಡ್ಜೋಲ್ ಮಾತ್ರೆ ಪ್ರಯೋಜನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಜಿಲ್ಲೆಯ 1ರಿಂದ 19ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಲ್ಬೆಂಡ್ಜೋಲ್ ಮಾತ್ರೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 10ರಂದು ಸಕರ್ಾರಿ, ಖಾಸಗಿ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ಅಲ್ಬೆಂಡ್ಜೋಲ್ ಮಾತ್ರೆಗಳನ್ನು ನೀಡಬೇಕು ಎಂದರು.
ಅಲ್ಬೆಂಡ್ಜೋಲ್ ಮಾತ್ರೆ ಚೀಪುವುದರಿಂದ ಮಕ್ಕಳಲ್ಲಿ ರಕ್ತಹೀನತೆ ನಿಯಂತ್ರಣ ಮತ್ತು ಪೋಷಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ. ಹಾಗಾಗಿ, ಯಾವುದೇ ಮಗು ಮಾತ್ರೆಯಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಖಾಸಗಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಂದ ಸುತ್ತೋಲೆ ಹೊರಡಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿಗಳು, ತಾಪಂ ಇಒ ಮತ್ತು ಬಿಇಒ ಅವರು ಸಭೆ ನಡೆಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಿರುವ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಸ್ವಯಂ ಸೇವಕರಿಂದ ನಿದರ್ಿಷ್ಟ ಶಾಲೆ ಅಥವಾ ಅಂಗನವಾಡಿಗಳಲ್ಲಿ ಜಾಗೃತಿ ಮೂಡಿಸಲು ತಿಳಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳ ಕಸ ವಿಲೇವಾರಿ ವಾಹನಗಳಲ್ಲಿನ ಮೈಕ್ ಮೂಲಕ ದಿನಾಚರಣೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಅದರಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ 9ರಂದು ಬೆಳಗ್ಗೆ ಮತ್ತು ಸಂಜೆ ಡಂಗೂರ ಸಾರಬೇಕು. ದಿನಾಚರಣೆಯಂದು ಜನಪ್ರತಿನಿಧಿಗಳು, ಸಾರ್ವಜನಿಕರನ್ನು ಆಹ್ವಾನಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಕಳಪೆ ನೈರ್ಮಲ್ಯ ಮತ್ತು ಕೊಳಕು ಸ್ಥಳಗಳಲ್ಲಿ ಜಂತುಹುಳ ಸೋಂಕು ಉಂಟಾಗುತ್ತವೆ. ಜಂತುಹುಳು ಸೋಂಕಿತ ಮಣ್ಣಿನ ಸಂಪರ್ಕದಿಂದ ಮಕ್ಕಳಿಗೆ ಹರಡುತ್ತವೆ. ಮಕ್ಕಳ ಕರುಳಿನಲ್ಲಿ ಹೆಚ್ಚು ಸಂಖ್ಯೆಯ ಜಂತುಹುಳ ಇದ್ದಲ್ಲಿ ಹೆಚ್ಚು ಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜಂತುಹುಳ ನಾಶಕ್ಕಾಗಿ 1-2 ವರ್ಷ ಮಕ್ಕಳಿಗೆ ಅರ್ಧ ಮಾತ್ರೆ (400 ಎಂ.ಜಿ), 2-19 ವರ್ಷದ ಮಕ್ಕಳಿಗೆ 1 ಮಾತ್ರೆ (400 ಎಂ.ಜಿ) ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್.ಪಾಟೀಲ್ ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ಜಿಲ್ಲಾ ಕುಷ್ಠ ರೋಗ ನಿರ್ಮೂ ಲನಾ ಅಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಲಕ್ಷ್ಮೀಕಾಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಇದ್ದರು.