ಪಾಂಡವಪುರ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿ.9ರಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಈ ವರ್ಷದ ಕೊನೆಯ ಬೃಹತ್ ಜನತಾ ನ್ಯಾಯಾಲಯ ಆಯೋಜಿಸಲಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಹೇಳಿದರು.
ಚಾಲ್ತಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಲಾಗುವುದು. ಇದರಿಂದ ಕಕ್ಷಿದಾರರಿಗೆ ಸಮಯ ಮತ್ತು ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಜತೆಗೆ ಕುಟುಂಬದ ಸದಸ್ಯರ ನಡುವಿನ ವೈಮನಸ್ಸು, ವ್ಯಕ್ತಿಗಳ ನಡುವಿನ ದ್ವೇಷ, ಅಸೂಯೆ ಮರೆಯಾಗಿ ಉತ್ತಮ ಸಾಮರಸ್ಯ ಮೂಡಲಿದೆ. ಹೀಗಾಗಿ ಕಕ್ಷಿದಾರರು ರಾಜಿ ಸಂಧಾನಕ್ಕೆ ಯೋಗ್ಯವಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಪಾರ್ವತಮ್ಮ ಮಾತನಾಡಿ, ಕಳೆದ ಸೆ.9ರಂದು ಆಯೋಜನೆಯಾಗಿದ್ದ ಜನತಾ ನ್ಯಾಯಾಲಯದಲ್ಲಿ 1838 ಚಾಲ್ತಿ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 840 ಪ್ರಕರಣಗಳನ್ನು ರಾಜಿ, ಸಂಧಾನಕ್ಕೆ ಪರಿಗಣಿಸಲಾಗಿತ್ತು. ಈ ಪೈಕಿ 450 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು. 13 ಎಂವಿಸಿ ಪ್ರಕರಣದಲ್ಲಿ 65.38 ಲಕ್ಷ ರೂ.ಗಳನ್ನು ಗಾಯಾಳುಗಳಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 37 ಚೆಕ್ ಬೌನ್ಸ್ ಪ್ರಕರಣದಲ್ಲಿ 78,79,500 ರೂ. ಇತ್ಯರ್ಥವಾಗಿದೆ. ಬ್ಯಾಂಕ್ ಸಾಲದ 8 ಪ್ರಕರಣದಲ್ಲಿ 27.57 ಲಕ್ಷ ರೂ. ಹಾಗೂ ಎಕ್ಸಿಕ್ಯೂಷನ್ ರಿಕವರಿಯಲ್ಲಿ 14.59 ಲಕ್ಷ ರೂ. ಸಹಿತ ಒಟ್ಟಾರೆ 2.1 ಕೋಟಿ ರೂ. ಮೊತ್ತ ಜನತಾ ನ್ಯಾಯಾಲಯದ ರಾಜಿ ಸಂಧಾನದ ಮೂಲಕ ಬಗೆಹರಿದಿದೆ ಎಂದು ಮಾಹಿತಿ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥವಾದರೆ ಎರಡೂ ಕಡೆಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪಾವತಿಸಿದ್ದ ಶುಲ್ಕ ಶೇ.100ರಷ್ಟು ವಾಪಸಾಗುತ್ತದೆ. ವಕೀಲರ ಸಂಘದಿಂದ ಜನತಾ ನ್ಯಾಯಾಲಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು ಮಾತನಾಡಿ, ಲೋಕಾ ಅದಾಲತ್ ಬಗ್ಗೆ ಕಕ್ಷಿದಾರರು ಗೊಂದಲಕ್ಕೆ ಒಳಗಾಗಬಾರದು. ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ಕಕ್ಷಿದಾರರು ಒಪ್ಪಿಕೊಂಡರೆ ಮಾತ್ರ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ ಎಂದರು.